ನಾವು ಅತಿಯಾಗಿ ಮೊಬೈಲ್ ಫೋನ್‍ಗಳನ್ನು ಬಳಸಿದರೆ ಏನಾಗುತ್ತೆ ಗೊತ್ತಾ?

847

ಇಂದಿನ ದಿನಗಳಲ್ಲಿ ಎಲ್ಲರ ಕೈಯಲ್ಲೂ ಇರುವ ಏಕೈಕ ಸಾಧನ ಎಂದರೆ ಅದು ಮೊಬೈಲ್. ಹೌದು ಜೀವನದ ಬಹುಮುಖ್ಯ ಭಾಗವಾಗಿ ಈ ಮೊಬೈಲ್‍ಗಳು ಪಾತ್ರ ನಿರ್ವಹಿಸುತ್ತದೆ. ಮೊಬೈಲ್ ಎಷ್ಟು ಉಪಯುಕ್ತವೋ ಅಷ್ಟೇ ಅಪಾಯಕಾರಿ.
ದೈನಂದಿನ ಜೀವನದಲ್ಲಿ ಮೊಬೈಲ್ ಫೋನ್‍ಗೆ ನಾವು ಯಾವ ರೀತಿ ಹೊಂದಿಕೊಂಡಿದ್ದೇವೆ ಎಂದರೆ ಬೆಳಿಗ್ಗೆ ಅಲರಾಮ್‍ನಿಂದ ಹಿಡಿದು ರಾತ್ರಿ ಮಲಗುವವರೆಗೂ ಬಿಟ್ಟಿರದ ವಸ್ತುವೆಂದರೆ ಅದು ಮೊಬೈಲ್ ಮಾತ್ರ. ಒಂದು ಹೊತ್ತು ಊಟ ಬಿಟ್ಟರು ಒಂದು ಕ್ಷಣ ಮೊಬೈಲ್ ಬಿಟ್ಟಿರದೇ ಅದರಲ್ಲೇ ಸಮಯವನ್ನು ಕಳೆಯುತ್ತಿದ್ದೇವೆ.

ಇದರ ಜೊತೆಗೆ ನಮ್ಮ ಸ್ನೇಹಿತರು, ಸಂಬಂಧಿಕರು, ಆಪ್ತರು ನಮ್ಮ ಪಕ್ಕದಲ್ಲೇ ಕುಳಿತಿದ್ದರು ಅದರ ಪರಿವೆ ಇಲ್ಲದೆ ನಾವು ಮೊಬೈಲ್‍ನಲ್ಲಿ ಮಗ್ನರಾಗಿದ್ದೇವೆ. ಫೇಸ್‍ಬುಕ್, ಟ್ವಿಟರ್, ವಾಟ್ಸಾಪ್, ಇನ್‍ಸ್ಟಾಗ್ರಾಮ್ ನಂತಹ ಸಾಮಾಜಿಕ ಜಾಲತಾಣದಲ್ಲಿ ಸಮಯ ಕಳೆಯುತ್ತಿದ್ದು, ಸ್ನೇಹ, ಸಂಬಂಧವನ್ನು ಮರೆಯುತ್ತಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ಕೆಲ ದಿನಗಳ ಹಿಂದೆ ನವರಸನಾಯಕ ನಟ ಜಗ್ಗೇಶ್ ಅವರು ಧ್ವನಿ ಎತ್ತಿದ್ದರು. “ನಮ್ಮ ದೇಶಕ್ಕೆ ಬಂದ ಹೊಸ ಕಾಯಿಲೆ ಮೊಬೈಲ್ ರೋಗ. ಬಂಧು ಬಾಂಧವರು ಪಕ್ಕದಲ್ಲೇ ಇದ್ದರು ಸತ್ತವರಂತೆ ಭಾವಿಸಿ ಮೊಬೈಲ್‍ನಲ್ಲಿ ತಲ್ಲೀನರಾಗಿರುತ್ತಾರೆ. ಈ ರೋಗಕ್ಕೆ ಮದ್ದು ಕಂಡು ಹಿಡಿಯದಿದ್ದರೆ ಮಾನವರು ಏಕಾಂಗಿ ಎಂಬ ರೋಗದಿಂದ ಸಾವನ್ನಪ್ಪುತ್ತಾರೆ. ದಯಮಾಡಿ ಬೇಡಿ ಬೇಗ ಈ ರೋಗಕ್ಕೆ ಔಷದಿ ಕಂಡುಹಿಡಿದು ಈ ರೋಗದಿಂದ ಜನರನ್ನು ಉಳಿಸಬೇಕು ಎಂದಿದ್ದರು”. 
ಮೊಬೈಲ್ ಫೋನ್‍ಗಳನ್ನು ಎಲ್ಲಿ ಯಾವಾಗ ಹೇಗೆ ಬಳಸಬೇಕೆಂಬ ಪರಿವೆ ಇಲ್ಲದೆ ದೇವಸ್ಥಾನ, ಆಸ್ಪತ್ರೆ ಸೇರಿದಂತೆ ಮುಂತಾದೆಡೆ ಫೋನ್ ಬಳಕೆ ನಿಷೇಧಿಸಿದೆ ಎಂದು ಬರೆದಿದ್ದರೂ ಅದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲೆಂದರೆ ಅಲ್ಲಿ ತಮಗೆ ಅರಿವಿಲ್ಲದ ಹಾಗೇ ಫೋನ್‍ಗಳನ್ನು ಬಳಸುತ್ತಾರೆ.

ಮೊಬೈಲ್ ಬಳಕೆ ಇಂದು ಸರ್ವವ್ಯಾಪಿಯಾಗಿದ್ದು, ಅದು ಎಷ್ಟರ ಮಟ್ಟಿಗೆ ಎಂದರೆ ಒಂದು ಕಡೆ ಕುಳಿತುಕೊಂಡು ಮಾತನಾಡದೆ ರಸ್ತೆಯ ಉದ್ದಗಲಕ್ಕೂ ಓಡಾಡಿಕೊಂಡು ವಾಹನಗಳು ಹಾರ್ನ್ ಮಾಡಿದರು ಅಪಘಾತದ ಪರಿವೆ ಇಲ್ಲದ ಹಾಗೆ ಮೊಬೈಲ್‍ನಲ್ಲಿ ಮುಳುಗಿ ಹೋಗಿರುತ್ತಾರೆ.

ಮೊಬೈಲ್ ಫೋನ್‍ಗಳು ಕೇವಲ ದೊಡ್ಡವರ ಮೇಲೆ ಅಲ್ಲದೆ ಚಿಕ್ಕ ಮಕ್ಕಳ ಮೇಲೂ ಪ್ರಭಾವ ಬೀರಿದೆ. ಹಿಂದಿನ ದಿನಗಳಲ್ಲಿ ಎಳೆ ಮಗುವನ್ನು ಮಲಗಿಸಲು ಲಾಲಿ ಹಾಡು, ಜೋಗುಳದ ಹಾಡನ್ನು ಹಾಡಿ ಮಲಗಿಸುತ್ತಿದ್ದರು. ಆದರೆ ಕಾಲ ಬದಲಾದಂತೆ ಈಗಾ ಮಗು ಮಲಗುವ ತೊಟ್ಟಿಲೊಳಗೆ ಮೊಬೈಲ್ ಫೋನ್ ಇಟ್ಟು ಹಾಡು ಹಾಕಿ ಮಲಗಿಸುತ್ತಾರೆ. ಹೀಗೆ ಮುಂದುವರೆದು ಮಗು ಅತ್ತ ತಕ್ಷಣ ಮೊಬೈಲ್ ಕೊಟ್ಟು ಸಮಾಧಾನ ಮಾಡುತ್ತಾರೆ.
ಇತ್ತೀಚೆಗೆ ಮಕ್ಕಳು ಹೊರಾಂಗಣ ಆಟವನ್ನು ಆಡದೇ ಟಿ.ವಿ, ಗೇಮ್ಸ್‍ನಲ್ಲೇ ಮಗ್ನರಾಗಿರುತ್ತಾರೆ. ಇದರಿಂದ ಮಕ್ಕಳು ಮನೆಯ ಹೊರಗೆ ಆಟವಾಡಲು ಅಥವಾ ಬೇರೆ ಮಕ್ಕಳೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ಇದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ.

ಅತೀ ಹೆಚ್ಚು ಮೊಬೈಲ್ ಬಳಕೆಯ ದುಷ್ಪರಿಣಾಮ
• ಕುಟುಂಬದೊಂದಿಗೆ ಸಮಯ ಕಳೆಯುವ ಅವಕಾಶ ಕಡಿಮೆ
• ಏಕಾಗ್ರತೆಗೆ ಭಂಗವಾಗುತ್ತದೆ.
• ತಲೆ ತಗ್ಗಿಸಿ ಮೊಬೈಲ್ ನೋಡುವುದರಿಂದ ಕತ್ತಿನ ಸ್ನಾಯುಗಳು, ಭುಜದ ಸ್ನಾಯುಗಳು ಸಂಕುಚಿತಗೊಳ್ಳುತ್ತದೆ.
• ಗಂಟೆ ಗಟ್ಟಲೆ ಮೊಬೈಲ್‍ನಲ್ಲಿ ಮಾತನಾಡುವುದರಿಂದ ಕಿವುಡುತನ ಸಮಸ್ಯೆ ಕಾಡತೊಡಗುತ್ತದೆ.
• ಮೊಬೈಲ್‍ನ್ನು ಹೆಚ್ಚು ಬಳಸುವುದರಿಂದ ಕಣ್ಣಿನ ಸಮಸ್ಯೆ ಎದುರಿಸಬೇಕಾಗುತ್ತದೆ.
• ನಿರಂತರ ಮೊಬೈಲ್ ಬಳಕೆಯಿಂದ ತಲೆ ನೋವು, ತಲೆ ಸುತ್ತುವಿಕೆ ಸೇರಿದಂತೆ ಹಲವು ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ.
• ಮಕ್ಕಳು, ಹದಿಹರೆಯದವರು ಹೆಚ್ಚು ಮೊಬೈಲ್ ಬಳಸುವುದರಿಂದ ಮೆದುಳಿನ ಕ್ಯಾನ್ಸರ್‍ಗೆ ಒಳಗಾಗುವ ಸಾಧ್ಯತೆ ಹೆಚ್ಚು.
• ಮೊಬೈಲ್ ಬಳಕೆಯಿಂದ ನಿದ್ರಾಹೀನತೆಯ ಸಮಸ್ಯೆ ಕಾಡುತ್ತದೆ.
• ವಾಹನ ಚಾಲನೆಯ ಸಮಯದಲ್ಲಿ ಮೊಬೈಲ್ ಬಳಸುತ್ತಾರೆ ಅದು ಅಪಘಾತಕ್ಕೆ ಕಾರಣವಾಗಬಹುದು.
• ಮೊಬೈಲ್ ಫೋನ್‍ಗಳೊಂದಿಗೆ ಹೆಚ್ಚು ಸಮಯ ಕಳೆಯುವವರು ಒತ್ತಡ, ಆಯಾಸಕ್ಕೆ ಒಳಗಾಗುತ್ತಾರೆ ಎಂದು ಅಧ್ಯಯನ ಸಾಬೀತು ಪಡಿಸಿದೆ.
• ಹೆಚ್ಚು ಮೊಬೈಲ್ ಬಳಕೆ ಮಾನಸಿಕ ಅಸ್ವಸ್ಥತೆಗಳಿಗೂ ಕಾರಣವಾಗಬಹುದು.