ಆಷಾಢ ಮಾಸದಲ್ಲಿ ಗಂಡ ಮತ್ತು ಹೆಂಡತಿ ಲೈಂಗಿಕ ಕ್ರಿಯೆ ಆಚರಿಸಿಕೊಳ್ಳಬಾರದು ಎನ್ನುವುದಕ್ಕೆ ಇನ್ನೊಂದು ವೈಜ್ಞಾನಿಕ ಕಾರಣವಿದೆ. ಈ ತಿಂಗಳಲ್ಲಿ ಕೂಡಿಕೆ ಫಲಪ್ರದವಾಗಿ ಹೆಂಡತಿ ಗರ್ಭ ಧರಿಸಿದರೆ ಮುಂದೆ ಪ್ರಸವವಾಗುವುದು ಬೇಸಿಗೆಯ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ.

ಹಸಿಹಸಿ ಬಾಣಂತಿ ಉಷ್ಣಯುಕ್ತ ಆಹಾರಗಳನ್ನು ಸೇವಿಸುತ್ತಿರುತ್ತಾಳೆ. ಬೇಸಿಗೆಯಲ್ಲಿ ಇಂಥ ಆಹಾರಗಳನ್ನು ಮತ್ತಷ್ಟು ಸೇವಿಸಿದರೆ ಆರೋಗ್ಯದಲ್ಲಿ ಏರುಪೇರಾಗುವುದು ನಿಶ್ಚಿತ. ಅಲ್ಲದೆ, ಕೂಸಿನ ಮೇಲೆಯೂ ಇದು ದುಷ್ಪರಿಣಾಮವಾಗುವ ಸಂಭವನೀಯತೆಯೆ ಹೆಚ್ಚು.
ಬೇಸಿಗೆಯಲ್ಲಿ ಈ ಅನಪೇಕ್ಷಿತ ತೊಂದರೆಗಳನ್ನು ಮೈಮೇಲೆ ಎಳೆದುಕೊಳ್ಳುವುದಕ್ಕಿಂತ ಆಷಾಢದ ಮಳೆಗಾಲದಲ್ಲಿಯೇ ಜಾಣ್ಮೆಯಿಂದ ಗಂಡ ಹೆಂಡತಿ ದೂರವಿರುವುದು ವಿಹಿತವಲ್ಲವೆ? ಅಷ್ಟು ಮಾತ್ರವಲ್ಲ, ಬೇಸಿಗೆಯಲ್ಲಿ ಸಿಡುಬು, ದಡಾರ ಮುಂತಾದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ ಎನ್ನುತ್ತಾರೆ ಆಯುರ್ವೇದ ವೈದ್ಯರು.
ಈ ನಾಲ್ಕನೆಯ ಕಾರಣ ಮಳೆಗಾಲದಲ್ಲಿ ಮೊಳಕಾಲು ಉದ್ದ ಕೆಸರಲ್ಲಿ ಕಾಲು ಹುದುಗಿಸಿ ದುಡಿದು ದೇಶಕ್ಕಾಗಿ ಅನ್ನ ನೀಡುವ ಉಳುವ ಯೋಗಿಗಳಿಗೆ ಮಾತ್ರ ಅನ್ವಯ. ಮಳೆಹನಿ ಇಳೆಗೆ ಬಿದ್ದೊಡನೆ ಕೈಯಲ್ಲಿ ನೇಗಿಲು ಹಿಡು, ಎತ್ತುಗಳನ್ನು ಹೂಡಿ, ಭೂಮಿ ಹಸನು ಮಾಡಿ, ಬೀಜವನ್ನು ಬಿತ್ತುವ ಕಾಲ. ನಮಗೆ ಬೇಕೆಂದಾಗ ಮಳೆ ಬರುವುದಿಲ್ಲ, ಮಳೆ ಬಂದಾಗ ಬಿತ್ತಲು ರೈತರು ಸಿದ್ಧರಾಗಿರಬೇಕು.
ನೋಟದಲ್ಲೇ ಮಾಯ ಮಾಡುವ ಹೆಂಡತಿಯನ್ನು ಆಷಾಢದಲ್ಲಿ ಕೂಡಿ, ಹೊಸ ಜೀವಕಳೆಯ ಕನಸನ್ನು ಕಾಣುತ್ತ ಬೆಚ್ಚನೆ ಮನೆಯಲ್ಲೇ ಕುಳಿತರೆ, ಇಳೆಯಲ್ಲಿ ಬೀಜ ಬಿತ್ತಿ ಮೊಳಕೆಯೊಡುವುದು ಯಾವ ಕಾಲದಲ್ಲಿ. ಈ ಕಾಲದಲ್ಲಿ ಏಕಾಗ್ರತೆ ಕಳೆದುಕೊಂಡು ಮೈಮರೆತರೆ ಇಡೀ ವರ್ಷ ಅರೆಹೊಟ್ಟೆಯೇ ಗ್ಯಾರಂಟಿ.ಇಂಥ ಸಂದರ್ಭದಲ್ಲಿ ಮದುವೆ ಮಾಡಿ ರೈತ ಮತ್ತು ಆತನ ಹೆಂಡತಿ ಒಬ್ಬರನ್ನೊಬ್ಬರು ನೋಡುತ್ತ ಮನೆಯಲ್ಲಿ ಕುಳಿತರೆ ಎತ್ತುಗಳೇ ಜಾಡಿಸಿ ಒದ್ದಾವು. ಚಕ್ಕಡಿ ಗಾಡಿಯನ್ನು ಹೂಡಿಕೊಂಡು, ಬಗಲಲ್ಲಿ ಕಟಕು ರೊಟ್ಟಿ, ಗುರೆಳ್ಳು ಚಟ್ನಿ ತುಂಬಿಕೊಂಡು ಹೊಲದ ಕಡೆಗೆ ಕಾಲು ಹಾಕುವ ರೈತನನ್ನು ಕಂಡರೆ ಎತ್ತುಗಳಿಗೆ ಅದೇನೋ ಪ್ರೀತಿ.
ಹೀಗಾಗಿ ಹೆಂಡತಿಯ ಬಿಸುಪಿನ ಅಪ್ಪುಗೆಯಲ್ಲಿ ಗಂಡ ಮೈಮರೆಯುವ ಮುನ್ನ ಹೆಂಡತಿಯನ್ನು ತವರು ಮನೆಗೆ ಕಳುಹಿಸಲಾಗುತ್ತದೆ. ಬಿತ್ತುವ ಕಾರ್ಯ ಮುಗಿದು ಬೆಳೆ ನಳನಳಿಸುವ ಸಮಯಕ್ಕೆ ವಾಪಸ್ ಬರುತ್ತಾಳೆ. ಆಗ ಮತ್ತೊಂದು ಕನಸು ಕುಡಿಯೊಡೆದಿರುತ್ತದೆ.










