ಇಂದು ತಂತ್ರಜ್ಞಾನ ವೇಗವಾಗಿ ಬೆಳೆದಂತೆಲ್ಲಾ ಮಕ್ಕಳಿಂದ ಹಿಡಿದು ಮುದುಕರವರೆಗೂ ಮೊಬೈಲ್ ಫೋನ್ ಬಳಕೆ ಮಿತಿಮೀರಿದೆ.
ಇಂದಿನ ಸ್ಪರ್ಧಾ ಯುಗದಲ್ಲಿ ತಂದೆ ತಾಯಿಯರ ಪ್ರೀತಿ ಕಾಳಜಿಯಿಂದ ವಂಚಿತರಾದ ಅದೆಷ್ಟೋ ಅಪ್ರಾಪ್ತರು ಸುಲಭವಾಗಿ ದಕ್ಕುವ ಮೊಬೈಲ್ ಗೀಳಿಗೆ ತುತ್ತಾಗುತ್ತಿರುವುದು ದುರಂತವೇ ಸರಿ. ಏಕೆಂದರೆ ಈ ಗೊಂದಲಮಯ ಪರಿಸ್ಥಿತಿಯಲ್ಲಿ ಯುವಜನತೆ ಸಾಮಾಜಿಕ ಜಾಲತಾಣಗಳನ್ನು ತಡಕಾಡುವಾಗ ಅಶ್ಲೀಲ ವಿಡಿಯೋಗಳು, ಅಕ್ರಮ ವೆಬ್ಸೈಟ್ಗಳು ತುಂಬಾ ಸುಲಭವಾಗಿ ಬಾಯ್ತೆರೆದು ಪ್ರವೇಶ ನೀಡುತ್ತವೆ. ಒಮ್ಮೆ ಇದರ ಸುಳಿಯಲ್ಲಿ ಸಿಲುಕಿದರೆ ಅಪ್ರಾಪ್ತರು ಹೊರಬರಲು ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ದುಷ್ಪರಿಣಾಮವನ್ನು ಬೀರಿ ಅವರು ಎಳೆ ವಯಸ್ಸಿನಲ್ಲಿ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿ,ವಿಕೃತ ಕಾಮನೆಗಳಿಗೆ ಬಲಿಯಾಗಿ ಲೈಂಗಿಕ ವಿಡಿಯೋಗಳನ್ನು ವೀಕ್ಷಿಸುವುದು,ಸಾಮಾಜಿಕ ಮಾಧ್ಯಮಗಳಲ್ಲಿ ಅನೈತಿಕ ಸಂಬಂಧ ಬೆಳೆಸುವುದು ನಂತರ ಇದರ ಪರಿಣಾಮದಿಂದಾಗಿ ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಧಾರಣೆ, ಡಿಪ್ರೆಶನ್ ಹಾಗೂ ಆತ್ಮಹತ್ಯೆಯಲ್ಲಿ ಕೊನೆಗೊಳ್ಳುವುದು ಸರ್ವೇಸಾಮಾನ್ಯವಾಗಿದೆ.
ಇಂತಹ ಸ್ಥಿತಿಗೆ ಕಾರಣವನ್ನು ಒಮ್ಮೆ ಅವಲೋಕಿಸಿದರೆ ಅದರಲ್ಲಿ ಪೋಷಕರಿಂದ ಮಕ್ಕಳ ಕಡೆಗಣನೆ,ಅವರಿಗೆ ಸರಿಯಾಗಿ ಸಮಯ ಹಾಗೂ ಮುಕ್ತಾಲೋಚನೆಗೆ ಅವಕಾಶ ಮಾಡಿ ಕೊಡದೆ ಇರುವುದು ಕಂಡುಬರುತ್ತದೆ.
ಮಕ್ಕಳು ಅತಿಯಾದ ಮೊಬೈಲ್ ಬಳಕೆ ಮಾಡುತಿದ್ದರು ಪೋಷಕರು ಗಮನಿಸದೆ ಇರುವುದು,ಅವರೊಂದಿಗೆ ಪ್ರೀತಿಂದ ಮಾತನಾಡದಿರುವುದು , ಲೈಂಗಿಕತೆಯ ಬಗ್ಗೆ ಮುಕ್ತ ಶಿಕ್ಷಣ ನೀಡದಿರುವುದು ಮುಂತಾದುವೆಲ್ಲ ಮಕ್ಕಳು ಅವರ ಭವಿಷ್ಯದ ಕವಲು ದಾರಿಯಲ್ಲಿ ಸ್ವೇಚ್ಛೆಯ ಮಾರ್ಗವನ್ನೇ ಆಯ್ಕೆ ಮಾಡಲು ಪ್ರೇರೇಪಿಸುತ್ತದೆ.
ಮಕ್ಕಳು ಅತಿಯಾದ ಮೊಬೈಲ್ ಬಳಕೆ ಮಾಡುತಿದ್ದರು ಪೋಷಕರು ಗಮನಿಸದೆ ಇರುವುದು,ಅವರೊಂದಿಗೆ ಪ್ರೀತಿಂದ ಮಾತನಾಡದಿರುವುದು , ಲೈಂಗಿಕತೆಯ ಬಗ್ಗೆ ಮುಕ್ತ ಶಿಕ್ಷಣ ನೀಡದಿರುವುದು ಮುಂತಾದುವೆಲ್ಲ ಮಕ್ಕಳು ಅವರ ಭವಿಷ್ಯದ ಕವಲು ದಾರಿಯಲ್ಲಿ ಸ್ವೇಚ್ಛೆಯ ಮಾರ್ಗವನ್ನೇ ಆಯ್ಕೆ ಮಾಡಲು ಪ್ರೇರೇಪಿಸುತ್ತದೆ.ಇನ್ನು ಮನೆಯಲ್ಲಿ ಅನಾದರಕ್ಕೊಳಗಾದ ಮಕ್ಕಳು ಹೊರಗಿನವರಿಂದ ಪ್ರೀತಿಯನ್ನು ಹುಡುಕಲು ಆರಂಭಿಸುತ್ತಾರೆ. ಅಂತಹ ಸಂದರ್ಭದಲ್ಲಿ ತಪ್ಪು ಸರಿ ನಿರ್ಧರಿಸುವ ಮೊದಲೇ ಪ್ರೀತಿ ಎಂಬ ಹೆಸರಿನಲ್ಲಿ ಲೈಂಗಿಕ ತೃಷೆಗೆ ಬಲಿಪಶುಗಳಾಗಿ ಹೋಗುತ್ತಿರುವುದು ಕೇದಕರವಾದ ಸಂಗತಿಯಾಗಿದೆ.
ಈ ಸಮಸ್ಯೆಯನ್ನು ತಡೆಯಲು ಪಾಲಕರು, ಶಿಕ್ಷಕರು ಹಾಗೂ ಸಮಾಜ ಸೇರಿ ಕಾರ್ಯನಿರ್ವಹಿಸಬೇಕಾಗಿದೆ. ಬಾಲಕ ಬಾಲಕಿಯರಿಗೆ ಸರಿಯಾದ ಮಾರ್ಗದರ್ಶನ, ಲೈಂಗಿಕ ಶಿಕ್ಷಣದ ಅರಿವು ಮತ್ತು ನೈತಿಕತೆ ಬಗ್ಗೆ ಬೋಧನೆ ನೀಡುವುದು ಇಂದಿನ ಅಗತ್ಯವಾಗಿದೆ.
ಮೊಬೈಲ್ ನಮ್ಮೆಲ್ಲರ ಬದುಕನ್ನು ಆಕ್ರಮಿಸಿಯಾಗಿದೆ ಆದರೆ ನಮ್ಮ ಸಮಯ ಸ್ಪೂರ್ತಿಯಿಂದ ಮೊಬೈಲ್ ಚಟಕ್ಕೆ ಬೀಳದೆ ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಂಡು ಜವಾಬ್ದಾರಿಯುತವಾಗಿ ನಡೆದುಕೊಳ್ಳುವುದು ಯುವಜನಾಂಗದ ಕರ್ತವ್ಯವಾಗಿದೆ. ಅಷ್ಟೇ ಅಲ್ಲದೆ ಲೈಂಗಿಕತೆ ಜೀವನದ ಒಂದು ಪ್ರಮುಖ ಅಂಶವಾಗಿದ್ದರೂ ಅದನ್ನು ಪ್ರೌಢ ಮನೋಭಾವದಿಂದ ಅರ್ಥಮಾಡಿಕೊಳ್ಳುವುದು ಅತಿಮುಖ್ಯ.
ಮೊಬೈಲ್ ಬಳಕೆಯಲ್ಲಿ ಸಂಯಮ ಇರಲಿ ಹಾಗೂ ಯುವಕರ ನಡೆ ಜವಾಬ್ದಾರಿಯುತವಾಗಿ ಎಂಬುದೇ ನಮ್ಮ ಆಶಯ.










