ಮಂಡ್ಯ: ರಾಜ್ಯ ರಾಜಕಾರಣದಲ್ಲಿ ವಿವಾದ ಹುಟ್ಟುಹಾಕಿದ್ದ ಉರಿಗೌಡ-ನಂಜೇಗೌಡ ಚಿತ್ರ ನಿರ್ಮಾಣಕ್ಕೆ ಬ್ರೇಕ್ ಬಿದ್ದಿದೆ. ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಭೇಟಿ ಬಳಿಕ ಸಚಿವ ಮುನಿರತ್ನ ಯೂಟರ್ನ್ ಹೊಡೆದಿದ್ದು, ಉರಿಗೌಡ-ನಂಜೇಗೌಡ ಸಿನಿಮಾದ ಚಿತ್ರೀಕರಣ ನಿರ್ಮಾಣ ಮಾಡಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಮಂಡ್ಯದ ಕೊಮ್ಮೇರನಹಳ್ಳಿಯಲ್ಲಿ ಸಚಿವ ಮುನಿರತ್ನ ಮಾತನಾಡಿ, ಉರಿಗೌಡ- ನಂಜೇಗೌಡ ಸಿನಿಮಾ ಮಾಡುವುದನ್ನ ಕೈ ಬಿಡುವಂತೆ ಸ್ವಾಮೀಜಿ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿಯ ಮಾತಿನಂತೆ ಸಿನಿಮಾ ನಿರ್ಮಾಣ ಮಾಡುವುದಿಲ್ಲ. ವೃಷಭ ಪ್ರೊಡಕ್ಷನ್ ನಲ್ಲಿ ಮೇ 14ರಂದು ಚಿತ್ರೀಕರಣದ ಮುಹೂರ್ತ ಮಾಡಬೇಕು ಅಂದುಕೊಂಡಿದ್ದೆ. ಮೈಸೂರು ಸಂಸ್ಥಾನ ಹಾಗೂ ಟಿಪ್ಪು ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಚರ್ಚೆಯಾಗಿತ್ತು ಎಂದು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಮುನಿರತ್ನನಿಗೆ ಅಶ್ವತ್ಥ್ ನಾರಾಯಣ್ ಸಿನಿಮಾ ಮಾಡೋಕೆ ಹೇಳಿರಬೇಕು ಎಂದಿದ್ದರು. ಅಲ್ಲಿಯವರೆಗೆ ನನಗೆ ಸಿನಿಮಾ ಮಾಡುವ ಆಲೋಚನೆ ಇರಲಿಲ್ಲ. ಸ್ವಾಮೀಜಿ ಅವರ ಜೊತೆ ಚರ್ಚೆ ಮಾಡಿದೆ. ಆಗ ನನಗೆ ಅನ್ನಿಸಿತು, ಸಿನಿಮಾ ಮಾಡಲು ಕಥೆಗಳು ತುಂಬಾ ಸಿಗುತ್ತದೆ. ಸ್ವಾಮೀಜಿ ಅವರಿಗೆ ಹೇಳಿದ್ದೇನೆ. ಯಾರ ಮನಸ್ಸು ನೋಯಿಸುವ ಉದ್ದೇಶ ನನ್ನದಲ್ಲ. ನಾನು ಈ ಸಿನಿಮಾವನ್ನು ಇಲ್ಲಿಗೆ ಕೈ ಬಿಡುತ್ತೇನೆ ಎಂದು ತಿಳಿಸಿದ್ದಾರೆ.
ವೃಷಭ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ಉರೀಗೌಡ-ನಂಜೇಗೌಡ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ ಎಂದು ಸಚಿವ ಮುನಿರತ್ನ ಅವರು ಟ್ವೀಟ್ ಮೂಲಕ ತಿಳಿಸಿದ್ದರು.










