ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದು ಬಿಡು ಕಂದ. ಆ ಮಗು ನಗುವಿನಲ್ಲೇ ನಿನ್ನ ನೋಡ್ತೀವಿ-ಚಿರುಗೆ ಕುಟುಂಬಸ್ಥರಿಂದ ಭಾವನಾತ್ಮಕ ಪತ್ರ…

738
firstsuddi

ಬೆಂಗಳೂರು : ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ನಮ್ಮನ್ನೆಲ್ಲಾ ಅಗಲಿ ಇಂದಿಗೆ 11 ದಿನ ಕಳೆದಿದ್ದು, ಹೀಗಾಗಿ ಸರ್ಜಾ ಕುಟುಂಬಸ್ಥರೆಲ್ಲರೂ ಸೇರಿ ನಟ ಧ್ರುವಾ ಸರ್ಜಾ ಅವರ ನೆಲಗುಳಿ ಗ್ರಾಮದಲ್ಲಿರುವ ಬೃಂದಾವನ ಫಾರ್ಮ್ ಹೌಸ್‍ನಲ್ಲಿರುವ ಚಿರಂಜೀವಿ ಸರ್ಜಾ ಅವರ ಸಮಾಧಿಗೆ ಪೂಜೆಯನ್ನು ಸಲ್ಲಿಸಿದರು. ಈ ವೇಳೆ ಅಗಲಿದ ಕುಟುಂಬದ ಕುಡಿಯನ್ನು ಮರೆಯಲಾಗದೆ ಕುಟುಂಬಸ್ಥರು ಚಿರಂಜೀವಿ ಸರ್ಜಾ ಅವರಿಗೆ ಭಾವನಾತ್ಮಕವಾಗಿ ಓಲೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ನಿನ್ನ ಮನ್ಸಿಗೆ ಯಾರಾದರೂ ಬೇಜಾರು ಮಾಡಿದ್ರೆ, ನೀನು ಕೋಪ ಮಾಡಿಕೊಂಡು ಸ್ವಲ್ಪ ಮಾತಾಡ್ಡಿದ್ರು, ನಮ್ಮನ್ನು ಬೈಕೊಂಡಿದ್ರು, ನಮಗೆ ಹೇಳದೆ ಯಾವುದಾದರೂ ಊರಿಗೆ ಹೋಗಿ ಬಂದಿದ್ರು ಪರವಾಗಿರುತ್ತಿರಲಿಲ್ಲ. ಆದರೆ ವಾಪಸ್ಸೇ ಬರಕ್ಕಾಗದಿರೋ ಅಂತ ಊರಿಗೆ ಹೋಗಿ ನಮಗೆಲ್ಲಾ ಅಂತ ಶಿಕ್ಷೆ ಕೊಟ್ಟಿದಿಯಲ್ಲಪ್ಪ.
ಕಣ್ಣು ಮುಚ್ಚಿದರೂ ನೀನೆ, ಕಣ್ಣು ತೆರೆದ್ರು ನೀನೆ, ನಿನ್ನ ನಗು ಮುಖ. ಸರಿ ಸ್ವಲ್ಪ ದಿನ ಆದ ಮೇಲೆ ಮರೆತು ಬಿಡುತ್ತಾರೆ ಎಂತ ನೀನು ತಿಳಿದುಕೊಂಡರೆ ಅದು ಸುಳ್ಳು. ನಮ್ಮೆಲ್ಲರಿಗೂ ಇದು ದೊಡ್ಡ ಗಾಯ. ಆರದೆ ಇರುವ ಅಂತ ಗಾಯ. ಯಾವಾಗಲೂ ನಮ್ಮ ಮನಸಲ್ಲಿ, ಹೃದಯದಲ್ಲೇ ಇರುತ್ತೀಯ ಕಂದ.
ನಿನ್ನ ತಾತ ನಿಂಗೆ ಚಿರಂಜೀವಿ ಅಂತ ಹೆಸರಿಟ್ಟರು. ಅದ್ಯಾವತ್ತು ಸುಳ್ಳಾಗಲ್ಲ. ನಿನ್ನ ಮಾತು, ನಿನ್ನ ಚಿರುನಗು, ನಿನ್ನ ನೆನಪು, ನಮ್ಮ ಸಂಬಂಧ ಯಾವಾಗಲೂ ಚಿರಂಜೀವಿಯಾಗೇ ಇರುತ್ತೆ ಬಂಗಾರ.
ಚಿರು…ಎಲ್ರು ಹೇಳ್ತಾರೆ ಈ ನೋವನ್ನು ತಡೆದುಕೊಳ್ಳುವ ಶಕ್ತಿ ಆ ದೇವರು ನಿಮ್ಮ ಇಡೀ ಕುಟುಂಬಕ್ಕೆ ಕೊಡಬೇಕು ಅಂತ ಆದರೆ ಅದು ನಿನ್ನ ಕೈಯಲ್ಲೇ ಇದೆ. ಹೇಗೆ ಅಂದ್ರೆ,
ನೀನೆ ನಿನ್ನ ಮಗುವಾಗಿ ನಮ್ಮ ಮಡಿಲಿಗೆ ಬಂದು ಬಿಡು ಕಂದ. ಆ ಮಗು ನಗುವಿನಲ್ಲೇ ನಿನ್ನ ನೋಡ್ತೀವಿ ಪ್ಲೀಸ್ ಎಂದು ನೋವಿನಿಂದ ಬರೆದುಕೊಂಡಿದ್ದಾರೆ.