ನೆರೆ ಸಂತ್ರಸ್ಥರಿಂದ ಮೂಡಿಗೆರೆಯಲ್ಲಿ ಬೃಹತ್ ಪ್ರತಿಭಟನೆ…

612

ಮೂಡಿಗೆರೆ : ನೆರೆ ಸಂತ್ರಸ್ಥರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದು, ಪರಿಹಾರ ವಿಳಂಬ ಧೋರಣೆ ಖಂಡಿಸಿ ನೆರೆ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಂತ್ರಸ್ಥರು ಲಯನ್ಸ್ ವೃತ್ತದಲ್ಲಿ ಧರಣಿ ನಡೆಸಿದರು. ನಷ್ಟವಾಗಿರುವ ಬೆಳೆ, ಭೂಮಿಗೆ ಸೂಕ್ತ ಪರಿಹಾರ ನೀಡುವಂತೆ ಹಾಗೂ ಮನೆ ಕಳೆದುಕೊಂಡವರಿಗೆ ಮನೆ ಬಾಡಿಗೆ ನೀಡುವಂತೆ ಪಟ್ಟು ಹಿಡಿದಿದ್ದು, ಮಹಾಮಳೆಯಿಂದ ಆದ ಅನಾಹುತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಆಗ್ರಹಿಸಿದರು. ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಸಂತ್ರಸ್ಥರಾದ ವಿಜಯ್ ಅವರು ಪರಿಹಾರ ಇಂದು ಬರುತ್ತೆ, ನಾಳೆ ಬರುತ್ತೆ ಅಂತಾ ಕಾದಿದ್ದೆ ಬಂತು. ನಾವು ಮನೆ-ಮಠ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿದ್ದೇವೆ. ಅನಾಹುತ ಆಗಿ ತಿಂಗಳು ಕಳೆದರೂ ಸರ್ಕಾರ ಮಾತ್ರ ಸಂತ್ರಸ್ಥರತ್ತ ತಿರುಗಿ ನೋಡುವ ಮನಸ್ಸು ಮಾಡಿಲ್ಲ. ರಾಜ್ಯ ಸರ್ಕಾರವಾಗಲಿ, ಕೇಂದ್ರ ಸರ್ಕಾರವಾಗಲಿ ಸಂತ್ರಸ್ಥರ ಬದುಕನ್ನು ಕಟ್ಟಿಕೊಡುವ ಕೆಲಸವನ್ನು ಮಾಡಲೇ ಇಲ್ಲ. ಮುಖ್ಯಮಂತ್ರಿ ಬಂದ್ರೂ ಹೋದ್ರೂ ಅಷ್ಟೇ ಸದ್ಯ ಇದರಿಂದ ರೋಸಿ ಹೋಗಿರುವ ನಾವುಗಳೆಲ್ಲಾ ನೆರೆ ಸಂತ್ರಸ್ಥರ ಹೋರಾಟ ಸಮಿತಿ ಮಾಡಿ ಸರ್ಕಾರಗಳ ವಿರುದ್ಧ ಹೋರಾಟ ಮಾಡುವ ದುಸ್ಥಿತಿ ನಮ್ಮ ಮಲೆನಾಡು ಜನರಿಗೆ ಎದುರಾಗಿರುವುದು ನಿಜಕ್ಕೂ ದುರಂತ ಎಂದರು. ಪ್ರತಿಭಟನೆಗೆ ಕಾಂಗ್ರೆಸ್, ಜೆಡಿಎಸ್, ಸಿಪಿಐ ಪಕ್ಷ ಸೇರಿದಂತೆ ರೈತಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸಾಥ್ ನೀಡಿದ್ದು, ಮಾಜಿ ಶಾಸಕಿ ಮೋಟಮ್ಮ ಹಾಗೂ ಬಿ.ಬಿ. ನಿಂಗಯ್ಯ, ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್ ಕುಮಾರ್, ಮುಖಂಡರಾದ ಹೆಚ್.ಹೆಚ್. ದೇವರಾಜ್, ಬಿದರಹಳ್ಳಿ ಲೋಹಿತ್ ಹಾಗೂ ರೈತ ಸಂಘದ ಮುಖಂಡರಾದ ದುಗ್ಗಪ್ಪ ಗೌಡ, ಕಾಂಗ್ರೆಸ್ ಪಕ್ಷದ ಮುಖಂಡರಾದ ಬಿದರಹಳ್ಳಿ ಜಯರಾಮ್, ಎಂ.ಎಸ್. ಅನಂತ್ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾದರು.