ಚಿಕ್ಕಮಗಳೂರು : ಪದವಿಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ನಗರದ ಕುವೆಂಪು ಕಲಾ ಮಂದಿರದಲ್ಲಿ ಕೊಪ್ಪಳದ ಹಾಲ್ಕುರಿಕೆ ರಂಗಭೂಮಿ ಸಂಸ್ಥೆಯಿಂದ ಗುರುವಾರ ನಡೆದ ಸಾಹಿತಿ ಡಾ|| ಚಂದ್ರಶೇಖರ ಕಂಬಾರರ ಬೋಳೆ ಶಂಕರ ನಾಟಕ ನೋಡುಗರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು.
ಹಾಲ್ಕುರಿಕೆ ನಾಟಕ ಶಾಲೆಯ ವಿದ್ಯಾರ್ಥಿಗಳ ಚುರುಕು ಸಂಭಾಷಣೆ, ಮಿಂಚಿನ ಅಭಿನಯ, ಗಾಯನ ಮತ್ತು ನೃತ್ಯ ವಿದ್ಯಾರ್ಥಿಗಳ ಚಿತ್ತವನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಟ್ಟಿತು.
ಆರಂಭದಲ್ಲಿ ಕಲಾವಿದರ ಅಭಿನಯ ಮತ್ತು ಪ್ರಾಸಬದ್ದ ಸಂಭಾಷಣೆ ಕಲಾ ಮಂದಿರದಲ್ಲಿ ನಗೆಯ ಬುಗ್ಗೆಯನ್ನೆಬ್ಬಿಸಿದರೆ ನಾಟಕ ಮುಂದುವರೆದಂತೆ ಬೋಳೆ ಶಂಕರನ ಪಾತ್ರಧಾರಿ ಪ್ರತಿಪಾದಿಸಿದ ಉದಾತ್ತ ಬದುಕು, ಆದರ್ಶ, ಆತನ ಮನಸ್ಸಿನ ತುಡಿತ, ಮಾನವೀಯ ಮೌಲ್ಯಗಳು ವಿದ್ಯಾರ್ಥಿಗಳನ್ನು ಗಂಭೀರ ಚಿಂತನೆಗೆ ಹಚ್ಚಿದವು.
ಇದೇ ವೇಳೆ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಪದವಿಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ|| ಎಂ.ಡಿ.ಸುದರ್ಶನ್ ನಾಟಕ ಪ್ರತಿಪಾದಿಸಿದ ಮಾನವೀಯ ಮೌಲ್ಯಗಳು, ಆದರ್ಶಗಳು ಮತ್ತು ಉದಾತ್ತ ಚಿಂತನೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಕ್ರಮದ ಆಯೋಜಕ, ರಂಗಭೂಮಿ ನಿರ್ದೇಶಕ ಹಾಲ್ಕುರಿಕೆ ಶಿವಶಂಕರ್ ನಾಟಕ ಪ್ರದರ್ಶನಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಉಪನ್ಯಾಸಕರಾದ ಸುನೀಲ್, ಶೇಷಾದ್ರಿ, ಪ್ರಕಾಶ್, ಸುಜಾತ, ಕವಿತಾ, ಎಲೈಟ್ ಕಾಲೇಜಿನ ಪ್ರಾಂಶುಪಾಲ ನವೀನ್ ಉಪಸ್ಥಿತರಿದ್ದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ನಾಟಕ ಪ್ರತಿಪಾದಿಸಿದ ಉದಾತ್ತ ಚಿಂತನೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು : ಡಾ|| ಎಂ.ಡಿ.ಸುದರ್ಶನ್.










