ಚಿಕ್ಕಮಗಳೂರು -ಪರಿಸರ ಸಂರಕ್ಷಣೆಯನ್ನು ಸಾರ್ವಜನಿಕರು ತಮ್ಮ ಕರ್ತವ್ಯವೆಂದು ಭಾವಿಸಬೇಕು, ಗಿಡಮರಗಳನ್ನು ಮುತುವರ್ಜಿಯಿಂದ ಬೆಳೆಸುವ ಮೂಲಕ ಮುಂದಿನ ಪೀಳಿಗೆಗೆ ಹಸಿರನ್ನು ಉಳಿಸಬೇಕು ಎಂದು ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಸಲಹೆ ಮಾಡಿದರು.
ಲಯನ್ಸ್ ಸಂಸ್ಥೆ ನಗರದ ಸಾಯಿ ಮಧುವನ ಬಡಾವಣೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವನಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಮ್ಮ ಪೂರ್ವಜರು ಪರಿಸರವನ್ನು ಮತ್ತು ಪ್ರಕೃತಿಯನ್ನು ದೇವರೆಂದು ಭಾವಿಸಿ ಪೂಜಿಸುತ್ತಿದ್ದರು, ಗಿಡಮರಗಳನ್ನು ಕಾಡನ್ನು ಯಥೇಚ್ಚವಾಗಿ ಬೆಳೆಸುತ್ತಿದ್ದರು. ಅದರಿಂದಾಗಿ ಅಂದು ಕಾಲಕಾಲಕ್ಕೆ ಮಳೆ ಬೆಳೆಯಾಗಿ ದೇಶ ಸಮೃದ್ದವಾಗಿತ್ತು ಎಂದ ಅವರು ಇತ್ತೀಚಿನ ವರ್ಷಗಳಲ್ಲಿ ದುರಾಸೆಯಿಂದ ಮರಗಿಡಗಳನ್ನು ಕಡಿದು ಕಾಡನ್ನು ನಾಶ ಮಾಡಿದ ಪರಿಣಾಮ ಮಳೆ ಮರೀಚಿಕೆಯಾಗುತ್ತಿದೆ ಎಂದು ವಿಷಾದಿಸಿದರು.
ಮನುಷ್ಯ ಆರೋಗ್ಯವಂತನಾಗಿ ಬದುಕಲು ಶುದ್ದವಾದ ಗಾಳಿ, ನೀರು, ಹಸಿರು ಪರಿಸರ ಅತ್ಯಂತ ಅಗತ್ಯ ಎಂದ ಅವರು ಇದನ್ನು ಸಾರ್ವಜನಿಕರು ಅರಿಯಬೇಕು, ಹಸಿರು ನಿರ್ಮಾಣಕ್ಕೆ ಪಣ ತೊಡಬೇಕು ಎಂದು ಕರೆ ನೀಡಿದರು.
ಲಯನ್ಸ್ ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಹೆಚ್.ಸಿ.ಶಶಿಪ್ರಸಾದ್ ಮಾತನಾಡಿ ನಾವು ಈಗಲಾದರೂ ಎಚ್ಚೆತ್ತು ಗಿಡಮರ ಮತ್ತು ಕಾಡನ್ನು ಬೆಳೆಸದಿದ್ದಲ್ಲಿ ಮುಂದಿನ ಪೀಳಿಗೆ ಭೀಕರ ಬರಗಾಲಕ್ಕೆ ತುತ್ತಾಗಿ ಕುಡಿಯಲೂ ನೀರಿಲ್ಲದಂತಹ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಲಯನ್ಸ್ ಅಧ್ಯಕ್ಷ ಕೆ.ಬಿ.ರವಿರಾಜ್ ರೈ ಕಾರ್ಯಕ್ರಮಕ್ಕೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದ ನಂತರ ಸಂಪಿಗೆ, ಮಾವು, ನೇರಳೆ, ಪನ್ನೇರಳೆ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಬಡಾವಣೆಯಲ್ಲಿ ನೆಡಲಾಯಿತು.
ಲಯನ್ಸ್ ಮಾಜಿ ಅಧ್ಯಕ್ಷರಾದ ಪ್ರೊ|| ಜಗದೀಶಪ್ಪ, ಹೆಚ್.ಸಿ.ಮಹೇಶ್, ಮಂಜುನಾಥ್ ಗೌಡ, ಕೆ.ಡಿ.ಪುಟ್ಟಣ್ಣ, ಕಾರ್ಯದರ್ಶಿ ಮನೋಜ್ ಬಸವರಾಜ್, ಖಜಾಂಚಿ ಜೆ.ಜಿ.ಜಯರಾಮೇಗೌಡ, ಲಯನೆಸ್ ಸಮನ್ವಯಾಧಿಕಾರಿ ದಾಕ್ಷಾಯಿಣಿ ಉಪಸ್ಥಿತರಿದ್ದರು.