‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ ಯೋಜನೆಯ ಸೌಲಭ್ಯಗಳನ್ನು ಬಿಡುಗಡೆ ಮಾಡಿದ ಪ್ರಧಾನಿ ಮೋದಿ.

76
firstsuddi

ನವದೆಹಲಿ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಮಕ್ಕಳಿಗಾಗಿ ಪಿಎಂ ಕೇರ್ಸ್ ಯೋಜನೆಯ ಸೌಲಭ್ಯಗಳನ್ನು ಬಿಡುಗಡೆ ಮಾಡಿದರು. ನಂತರ ಮಾತನಾಡಿದ ಪ್ರಧಾನಿ, ಈ ಯೋಜನೆಯಡಿ ಯಾರಾದರೂ ವೃತ್ತಿಪರ ಕೋರ್ಸ್‌ಗಳಿಗೆ, ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲದ ಅಗತ್ಯವಿದ್ದರೆ, PM-CARES ಸಹಾಯ ಮಾಡುತ್ತದೆ. ಮಕ್ಕಳಿಗೆ ಪ್ರತಿ ತಿಂಗಳು 4 ಸಾವಿರ ರೂಪಾಯಿ ನೀಡಲಾಗುತ್ತದೆ. ಇದು ಅವರ ದೈನಂದಿನ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ ಎಂದರು.

ಕೋವಿಡ್ ಹೆಮ್ಮಾರಿಯಿಂದ ತಂದೆ-ತಾಯಿಯನ್ನು ಕಳೆದುಕೊಂಡ ಮಕ್ಕಳ ನೆರವಿಗಾಗಿ ಕೇಂದ್ರ ಸರ್ಕಾರ ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್ ಯೋಜನೆಯನ್ನು ಆರಂಭಿಸಿತ್ತು. 2020 ಮಾರ್ಚ್ 11ರಿಂದ 2022ರ ಮಾರ್ಚ್ 28ರ ಅವಧಿಯಲ್ಲಿ ಕೋವಿಡ್ ನಿಂದ ಸಾವನ್ನಪ್ಪಿದವರ ಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಲಿದ್ದಾರೆ. ಸಮಗ್ರ ರಕ್ಷಣೆಯ ಭಾಗವಾಗಿ ಈ ಮಕ್ಕಳಿಗೆ ವಸತಿ, ವಿದ್ಯೆ, ಸ್ಕಾಲರ್ ಶಿಪ್ ಸಿಗಲಿದೆ. ಉನ್ನತ ಶಿಕ್ಷಣಕ್ಕೂ ನೆರವು ಸಿಗಲಿದೆ.

23 ವರ್ಷಕ್ಕೆ ಬಂದಾಗ ಆರ್ಥಿಕವಾಗಿ ಸ್ವಯಂಸಮೃದ್ಧಿ ಹೊಂದಲು 10 ಲಕ್ಷ ರೂಪಾಯಿ ನೆರವು ಕೂಡ ಯೋಜನೆಯಡಿ ಸಿಗಲಿದೆ. ಈ ಯೋಜನೆಯಡಿ ನೋಂದಾಯಿಸಿಕೊಳ್ಳಲು ಪ್ರತ್ಯೇಕ ವೆಬ್ ಪೋರ್ಟಲ್ ತೆರೆಯಲಾಗಿದೆ. ಮಾರ್ಚ್ 2022 ರಿಂದ ಪ್ರತಿ ತಿಂಗಳು 2,500 ರೂ. ಸ್ಪೈಫಂಡ್, ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ 50,000 ರೂ. ಮತ್ತು ಆಯುಷ್ಮಾನ್ ಹೆಲ್ತ್ ಕಾರ್ಡ್ ಮೂಲಕ 5 ಲಕ್ಷ ರೂ. ವಿಮೆ ಸಿಗಲಿದೆ.