ಪುನರ್ವಸತಿ ಕೇಂದ್ರವನ್ನು ಮುಚ್ಚಿ ನೆರೆಪೀಡಿತರನ್ನು ಸರ್ಕಾರ ಬೀದಿಯಲ್ಲಿ ನಿಲ್ಲಿಸಿದೆ : ಸಿದ್ದರಾಮಯ್ಯ.

211
firstsuddi

ಬೆಂಗಳೂರು : ರಾಜ್ಯದಲ್ಲಿ ಪ್ರವಾಹ ಬಂದು ಒಂದೂವರೆ ತಿಂಗಳು ಕಳೆದರೂ ರಾಜ್ಯ ಹಾಗೂ ಸರ್ಕಾರದಿಂದ ನೆರೆ ಸಂತ್ರಸ್ಥರಿಗೆ ಪರಿಹಾರ ಹಣ ಬಿಡುಗಡೆಯಾಗದ ಕಾರಣ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಟ್ವಿಟರ್ ಮೂಲಕ ಸರ್ಕಾರದ ವಿರುದ್ಧ ಅಸಮಾದಾನ ಹೊರಹಾಕಿದ್ದಾರೆ. ಪ್ರವಾಹದಿಂದ ಸಂಪೂರ್ಣ ಬೆಳೆ ನಷ್ಟ ಸಂಭವಿಸಿದೆ. ಬಿತ್ತನೆಗೆ ಸಾಲ ಪಡೆದ ರೈತರು ಬೆಳೆ ಇಲ್ಲದೆ ಸಂಕಷ್ಟದಲ್ಲಿ ದಿನ ದೂಡುವಂತಾಗಿದೆ. ಅಂತಹ ರೈತರನ್ನು ಗುರುತಿಸಿ ಅವರ ಸಾಲ ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ. ಪ್ರವಾಹದಿಂದ ಸಂಪೂರ್ಣ ಮನೆ ಹಾನಿಗೀಡಾಗಿದ್ದರೆ ರೂ.5 ಲಕ್ಷ, ಶೇ.75 ಹಾನಿಗೀಡಾಗಿದ್ದರೆ ರೂ.1 ಲಕ್ಷ, ಶೇ.25 ಹಾನಿಗೀಡಾಗಿದ್ದರೆ ರೂ.25,000 ನೀಡುವುದಾಗಿ ಘೋಷಿಸಿ ಯಡಿಯೂರಪ್ಪನವರು ಸಾಕಷ್ಟು ಪ್ರಚಾರ ಪಡೆದರೇ ಹೊರತು ನಯಾಪೈಸೆ ಸಂತ್ರಸ್ತರನ್ನು ತಲುಪಿಲ್ಲ. ಪುನರ್ವಸತಿ ಕೇಂದ್ರವನ್ನು ಮುಚ್ಚಿ ನೆರೆಪೀಡಿತರನ್ನು ಸರ್ಕಾರ ಬೀದಿಯಲ್ಲಿ ನಿಲ್ಲಿಸಿದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯನ್ನು ನಿಲ್ಲಿಸುವ ಹುನ್ನಾರ ಅತ್ಯಂತ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಳೆದ ಮೂರು ತಿಂಗಳುಗಳಿಂದ ಯೋಜನೆಗೆ ಅನುದಾನ ನೀಡಿಲ್ಲ, ಪ್ರವಾಹದಿಂದ ಉದ್ಯೋಗವಿಲ್ಲದೆ ಕಂಗಾಲಾದವರಿಗೆ ಉದ್ಯೋಗ ನೀಡಿದ್ದರೆ ಅವರ ಬದುಕಿಗೆ ಆಸರೆಯಾಗುತ್ತಿತ್ತು. ಆದರೆ ಸರ್ಕಾರ ಯೋಜನೆಯನ್ನೇ ಸ್ಥಗಿತಗೊಳಿಸುವ ಇರಾದೆ ಹೊಂದಿದಂತಿದೆ ಎಂದು ಟ್ವೀಟ್ ಮಾಡಿದ್ದಾರೆ.