ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮೂಲಕ ಉಚಿತ ಸೌಲಭ್ಯ ಪಡೆದುಕೊಳ್ಳಬೇಕು : ರವಿಕಲಾ ಪೈ

185
firstsuddi

ಮೂಡಿಗೆರೆ : ಪೋಷಕರು ತಮ್ಮ ಸ್ವಂತ ಇಚ್ಚಾಶಕ್ತಿಯಿಂದ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಶಾಲೆ ಮುಚ್ಚದಂತೆ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಣಕಲ್ ಶಾಮಣ್ಣ ಹೇಳಿದರು.
ಕೊಟ್ಟಿಗೆಹಾರದ ಸರ್ಕಾರಿ ಪ್ರೌಢಶಾಲೆಯ ಸಾಂಸ್ಕೃತಿಕ ಹಬ್ಬ ಕಾರ್ಯಕ್ರಮದಲ್ಲಿ ‘ಮಲಯ ಮಾರುತ’ ವೇದಿಕೆಯಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆ ಉಳಿಸುವುದಕ್ಕೆ ಪೋಷಕರ ಪಾತ್ರ ಮಾತ್ರವಲ್ಲ. ಸಾರ್ವಜನಿಕರು, ಶಿಕ್ಷಣ ಇಲಾಖೆಯೂ ಸೇರಿದಂತೆ ಪೋಷಕರು ಮಕ್ಕಳನ್ನು ಶಾಲೆಗಳಿಗೆ ಸೇರಿಸಿ ಸರ್ಕಾರಿ ಶಾಲೆಗಳನ್ನು ಅಭಿವೃದ್ದಿ ಪಡಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಖಾಸಗಿ ಶಾಲೆಗಳಿಗೆ ಮೀರಿದಂತೆ ಸರಕಾರಿ ಶಾಲೆಗಳು ಉತ್ತಮ ಗುಣಮಟ್ಟದ ವಿದ್ಯಾರ್ಚನೆ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ. ಇದರ ಸದುಪಯೋಗವಾದರೆ ದೇಶದ ಅಭಿವೃದ್ಧಿಯನ್ನು ಕಾಣಲು ಸಾಧ್ಯ. ಎಲ್ಲದಕ್ಕೂ ಇತರರನ್ನು ದೂಷಣೆ ಮಾಡುತ್ತ ಕಾಲಹರಣ ಮಾಡದೆ ಇರುವ ಲಭ್ಯತೆಯಲ್ಲಿಯೇ ಅನುಕೂಲತೆಯನ್ನು ಕಂಡುಕೊಳ್ಳಬೇಕು ಎಂದರು.
ತರುವೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರವಿಕಲಾ ಪೈ ಮಾತನಾಡಿ, ಸರ್ಕಾರಿ ಶಾಲೆಗಳು ಉಚಿತ ಸೌಲಭ್ಯದೊಂದಿಗೆ ಗುಣ ಮಟ್ಟದ ಶಿಕ್ಷಣ ನೀಡುತ್ತಿವೆ. ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಮೂಲಕ ಉಚಿತ ಸೌಲಭ್ಯ ಪಡೆದುಕೊಳ್ಳಬೇಕು. ಖಾಸಗಿ ಶಾಲೆಯಲ್ಲಿ ಶಿಕ್ಷಣ ನೀಡುವಂತೆ ಸರ್ಕಾರಿ ಶಾಲೆಗಳಲ್ಲೂ ಶಿಕ್ಷಣ ನೀಡಲಾಗುತ್ತಿದೆ. ಸಾಲ ಮಾಡಿಯಾದರೂ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವ ಇರಾದೆ ನಮ್ಮ ಪೋಷಕರಿಗೆ ಇದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ನಮ್ಮ ಕರ್ತವ್ಯ, ಆದರೆ ಸಮಾಜದಲ್ಲಿನ ಪ್ರತಿಷ್ಟೆಗೋಸ್ಕರ ತಮ್ಮನ್ನು ತಾವು ಸಾಲಗಾರರನ್ನಾಗಿ ಮಾಡಿಕೊಂಡು ಕೊರಗುವ ಬದಲು, ಮನೆಯ ಸಮೀಪದಲ್ಲಿಯೇ ಇರುವ ಸರ್ಕಾರಿ ಶಾಲೆಗೆ ಸೇರಿಸಿ ತಮ್ಮ ಮಕ್ಕಳ ಜೊತೆಗೆ ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದರು.
ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಂ.ಭರತ್ ಮಾತನಾಡಿ, ಶಾಲೆಯ ಸಮಿತಿಯು ಕ್ರೀಯಾಶೀಲರಾಗಿದ್ದರೆ ಶಾಲೆಗಳು ಕೂಡ ಪ್ರಗತಿಯಲ್ಲಿ ಸಾಗಲು ಸಾಧ್ಯವಾಗುತ್ತದೆ. ಸಮಿತಿ ಸದಸ್ಯರುಗಳು ಸದಾ ಹೊಸ ಆಲೋಚನೆಗಳತ್ತ ಗಮನ ಹರಿಸಬೇಕು. ಸ್ಥಳೀಯವಾಗಿ ಸಿಗುವ ಸಂಪನ್ಮೂಲಗಳನ್ನು ಬಳಸಿಕೊಂಡು ಮಕ್ಕಳ ಭೌತಿಕ ಅಭಿವೃದ್ಧಿಯತ್ತ ಗಮನ ಹರಿಸಬೇಕು. ಗ್ರಾಮಸ್ಥರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವುದರ ಜೊತೆಗೆ, ಪಕ್ಕದ ಗ್ರಾಮಗಳಿಗೂ ಸರಕಾರಿ ಶಾಲೆಗಳ ಮೇಲೆ ಒಲವು ಮೂಡಿಸಬೇಕು. ದಿನ ಕಳೆದಂತೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತದೆ. ಶಿಕ್ಷಣ ಇಲಾಖೆಯ ಪದಾಧಿಕಾರಿಗಳು ಶಾಲೆಗಳು ಆರಂಭವಾಗುವ ಆರು ತಿಂಗಳಿಗೆ ಮುಂಚಿತವಾಗಿಯೇ ವಿದ್ಯಾಭ್ಯಾಸಕ್ಕೆ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವಂತೆ ಗ್ರಾಮಸ್ಥರನ್ನು ಪ್ರೇರೇಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಮಕ್ಕಳ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ಶಾಲೆಯ ಪ್ರಗತಿಗೆ ಶ್ರಮಿಸಿದವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಸರ್ಕಾರಿ ಪ್ರೌಢಶಾಲೆಯ ಸಮಿತಿ ಅಧ್ಯಕ್ಷ ಸಂಜಯ್‍ಗೌಡ, ಸಮಿತಿಯ ಪದಾಧಿಕಾರಿ ಬಿ.ಎಂ.ಸತೀಶ್, ಮುಖ್ಯ ಶಿಕ್ಷಕಿ ಕಮಲ, ಶಿಕ್ಷಕ ಯೋಗೀಶ್, ಕಿರಣ್, ಶಿಕ್ಷಕಿ ಸೌಮ್ಯ, ಪ್ರಾಥಮಿಕ ಶಾಲಾ ಸಮಿತಿಯ ಅಧ್ಯಕ್ಷ ಕಾಂತರಾಜು, ಗೆಳೆಯರ ಬಳಗದ ಎ.ಎಸ್.ಅಶ್ವಥ್, ಶಿಕ್ಷಕ ಕುಮಾರ್, ಬಾಳೂರು ಉಮೇಶ್ ಇದ್ದರು.