ಪ್ರಕರಣದಲ್ಲಿ ಎಷ್ಟೇ ದೊಡ್ಡವರು ಭಾಗಿಯಾಗಿದ್ರೂ ಅವರ ವಿರುದ್ಧ ಕ್ರಮ ತಗೋತೀವಿ ಅಂತ ಮೊದಲೇ ಹೇಳಿದ್ದೆ : ಸಿಎಂ.

62
firstsuddi

ಬೆಂಗಳೂರು : ಪ್ರಕರಣದಲ್ಲಿ ಎಷ್ಟೇ ದೊಡ್ಡವರು ಭಾಗಿಯಾಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ನಾನು ಈ ಮೊದಲೇ ಹೇಳಿದ್ದೆ. ನಮ್ಮ ಸರ್ಕಾರವಾಗಿರುವ ಕಾರಣ ಎಡಿಜಿಪಿ ಅಮೃತ್ ಪೌಲ್ ಅವರನ್ನ ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಪಿಎಸ್ಐ ನೇಮಕಾತಿ ಹಗರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಎಡಿಜಿಪಿ ಅಮೃತ್ ಪೌಲ್ ಅವರನ್ನು ಇಂದು ಬಂಧಿಸಲಾಗಿದೆ. ಈ ವಿಚಾರವಾಗಿ ಕಬ್ಬನ್ ಪಾರ್ಕ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ನೇಮಕಾತಿ ಹಗರಣದ ತನಿಖೆ ನಡೆಸಲು ಸಿಐಡಿಗೆ ಸರ್ಕಾರ ಮುಕ್ತ ಅವಕಾಶ ನೀಡಿದ್ದರಿಂದಾಗಿ ಅಕ್ರಮ ಆರೋಪ ಸಂಬಂಧ ಎಡಿಜಿಪಿ ಅಮೃತ್ ಪಾಲ್ ಅವರನ್ನು ಬಂಧಿಸಲಾಗಿದೆ. ನಿಷ್ಪಕ್ಷಪಾತ ತನಿಖೆ ನಡೆಸಿ ಎಲ್ಲ ಆರೋಪಿಗಳನ್ನೂ ಬಂಧಿಸಲಾಗುತ್ತದೆ ಎಂದರು.

ಎಡಿಜಿಪಿ ಬಂಧನದಿಂದ ಸರ್ಕಾರಕ್ಕೆ ಮುಜುಗರವಾಗುವ ಪ್ರಶ್ನೆ ಉದ್ಭವವಾಗುವುದಿಲ್ಲ. ತನಿಖೆ ಮಾಡಿಸಿದ್ದೇ ನಾವು, ಅದೇ ಬೇರೆ ಸರ್ಕಾರ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ಈ ಹಿಂದೆ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ಆರೋಪ ಕೇಳಿಬಂದಾಗ ಯಾವುದೇ ತನಿಖೆ ಆಗಿರಲಿಲ್ಲ. ಆದರೆ ನಾವು ನಿಷ್ಪಕ್ಷಪಾತವಾಗಿ, ನಿರ್ದಾಕ್ಷಿಣ್ಯವಾಗಿ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.