ಪ್ರಚೋದನಾಕಾರಿ ಹೇಳಿಕೆ : ಬಿಜೆಪಿ ಮುಖಂಡನ ಬಂಧನ…

58
firstsuddi

ನವದೆಹಲಿ : ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಅವರಿಗೆ ಬೆದರಿಕೆ ಹಾಕಿರುವ ಆರೋಪದಡಿ ದೆಹಲಿ ಬಿಜೆಪಿ ಮುಖಂಡ ತಜಿಂದರ್ ಪಾಲ್ ಸಿಂಗ್ ಬಗ್ಗಾ ಅವರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ.

ಕೋಮು ಪ್ರಚೋದಕ ಹೇಳಿಕೆಗಳು, ಧಾರ್ಮಿಕ ದ್ವೇಷ ಉತ್ತೇಜಿಸುವ ಭಾಷಣ ಆರೋಪದ ಮೇಲೆ ಅವರಿಗೆ ಹಲವು ಬಾರಿ ನೋಟಿಸ್ ನೀಡಲಾಗಿದೆ. ಆದರೆ, ಅವರು ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನಲೆ ಅವರನ್ನು ನವದೆಹಲಿಯ ಜನಕಪುರಿಯಲ್ಲಿದ್ದ ಅವರ ನಿವಾಸದಿಂದಲೇ ಬಂಧಿಸಿ ಪಂಜಾಬ್ ಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದೆಹಲಿಗೆ ಬಂದು ಪಂಜಾಬ್ ಪೊಲೀಸರು ಬಿಜೆಪಿ ನಾಯಕನ ಬಂಧಿಸಿರುವ ಹಿನ್ನಲೆ ಪಂಜಾಬ್ ಪೊಲೀಸರ ವಿರುದ್ಧ ದೆಹಲಿ ಪೊಲೀಸರು ಅಪಹರಣ ಪ್ರಕರಣ ದಾಖಲು ಮಾಡಿದ್ದಾರೆ. ಬಗ್ಗಾ ಅವರ ತಂದೆ ದೂರಿನ ಮೇಲೆ ದೆಹಲಿ ಪೊಲೀಸರು ಈ ಪ್ರಕರಣ ದಾಖಲು ಮಾಡಿದ್ದಾರೆ. ಇನ್ನು ಈ ಘಟನೆಯನ್ನು ಬಿಜೆಪಿ ಖಂಡಿಸಿದ್ದು, ಇದು ಅರವಿಂದ್ ಕೇಜ್ರಿವಾಲ್ ದ್ವೇಷಪೂರಿತ ರಾಜಕೀಯ ಎಂದು ಆರೋಪಿಸಿದೆ.

ಬಗ್ಗಾ ಅವರನ್ನು ದೆಹಲಿಯಿಂದ ಕರೆದೊಯ್ಯುತ್ತಿದ್ದ ಪಂಜಾಬ್ ಪೊಲೀಸರ ವಾಹನವನ್ನು ಹರಿಯಾಣ ಪೊಲೀಸರು ಅಡ್ಡಗಟ್ಟಿದ್ದಾರೆ. ಇದರಿಂದ ಈ ಪ್ರಕರಣ ಮತ್ತಷ್ಟು ರಾಜಕೀಯ ಕಾವು ಪಡೆದುಕೊಂಡಿದೆ. ಪಂಜಾಬ್ ಪೊಲೀಸರು ಬಗ್ಗಾ ಅವರನ್ನು ಅವರ ನಿವಾಸದಿಂದ ಬಲವಂತವಾಗಿ ಎತ್ತಿಕೊಂಡು ಹೋಗಿದ್ದಾರೆ ಎಂಬ ಮಾಹಿತಿ ಇದೆ ಎಂದು ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ. ನಂತರ ದೆಹಲಿ ಪೊಲೀಸ್ ತಂಡ ಕುರುಕ್ಷೇತ್ರ ತೆರಳಿ ಬಗ್ಗಾನನ್ನು ವಶಕ್ಕೆ ತೆಗೆದುಕೊಂಡಿದ್ದು, ಈಗ ರಾಷ್ಟ್ರ ರಾಜಧಾನಿಗೆ ಕರೆದೊಯ್ಯಲಾಗುತ್ತಿದೆ ಎಂದು ಕುರುಕ್ಷೇತ್ರ ಪೊಲೀಸ್ ಅಧಿಕಾರಿಯೊಬ್ಬರು ದೂರವಾಣಿ ಮೂಲಕ ತಿಳಿಸಿದ್ದಾರೆ.

ಬಿಜೆಪಿ ಆರೋಪಗಳಿಗೆ ತಿರುಗೇಟು ನೀಡಿರುವ ಆಮ್ ಆದ್ಮಿ ಪಕ್ಷದ ನಾಯಕರು ತಜೀಂದರ್ ಬಗ್ಗಾ ಬಂಧನವನ್ನು ಸಮರ್ಥಿಸಿಕೊಂಡಿದ್ದಾರೆ. ಕೋಮು ಪ್ರಚೋದನೆ ಪ್ರಕರಣದಲ್ಲಿ ಈಗಾಗಲೇ ಬಗ್ಗಾ ಅವರಿಗೆ ಐದು ಬಾರಿ ನೋಟಿಸ್ ಕಳುಹಿಸಿದರೂ ತನಿಖೆಗೆ ಸಹಕರಿಸಲು ಅವರು ನಿರಾಕರಿಸಿದ ನಂತರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಎಪಿ ವಕ್ತಾರ ಸೌರಭ್ ಭಾರದ್ವಾಜ್ ತಿಳಿಸಿದ್ದಾರೆ.