ನವದೆಹಲಿ : ರಾಷ್ಟ್ರ ನಿರ್ಮಾಣಕ್ಕಾಗಿ ಭಾರತದ ಎಲ್ಲಾ ಪ್ರಧಾನ ಮಂತ್ರಿಗಳ ಕೊಡುಗೆಯನ್ನು ಗೌರವಿಸಲು ನಿರ್ಮಿಸಲಾಗಿರುವ ‘ಪ್ರಧಾನಮಂತ್ರಿ ಸಂಗ್ರಹಾಲಯ’ವನ್ನು ಇಂದು ಪ್ರಧಾನಿ ಮೋದಿಯವರು ಉದ್ಘಾಟನೆ ಮಾಡಿದ್ದಾರೆ. ಪಕ್ಷ, ಸಿದ್ದಾಂತ, ಅಧಿಕಾರವಾಧಿಯನ್ನು ಲೆಕ್ಕಿಸದೇ ಭಾರತವನ್ನಾಳಿದ ಎಲ್ಲ ಪ್ರಧಾನಿಗಳ ಮಂತ್ರಿಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ದೆಹಲಿಯ ತೀನ್ ಮೂರ್ತಿ ಎಸ್ಟೇಟ್ ನಲ್ಲಿ ನಿರ್ಮಿಸಲಾಗಿರುವ ಈ ಮ್ಯೂಸಿಯಂ ಇದುವರೆಗಿನ ಎಲ್ಲಾ 14 ಭಾರತೀಯ ಪ್ರಧಾನ ಮಂತ್ರಿಗಳ ಜೀವನ ಮತ್ತು ಸಮಯವನ್ನು ಒಳಗೊಂಡಿದೆ ಮತ್ತು ಅವರ ಕೊಡುಗೆಗಳನ್ನು ಪ್ರದರ್ಶಿಸುತ್ತದೆ. 10,000 ಚದರ ಮೀಟರ್ ನಲ್ಲಿ ನಿರ್ಮಾಣವಾಗಿರುವ ಮ್ಯೂಸಿಯಂ ಮಾಜಿ ಪ್ರಧಾನಿಗಳ ವಿಷಯಗಳನ್ನು ಒಳಗೊಂಡಿದೆ. ಇದರ ನಿರ್ಮಾಣಕ್ಕಾಗಿ 271 ಕೋಟಿ ರೂ. ಖರ್ಚು ಮಾಡಲಾಗಿದೆ.
ಪ್ರಧಾನಮಂತ್ರಿ ಸಂಗ್ರಹಾಲಯವನ್ನು ಬ್ಲಾಕ್ 1 ಮತ್ತು ಬ್ಲಾಕ್ 2 ಎಂದು ಗುರುತಿಸಲಾಗುತ್ತದೆ. ಈ ಮೊದಲು ಬ್ಲಾಕ್ 1 ಅನ್ನು ತೀನ್ ಮೂರ್ತಿ ಭವನ್ ಎಂದು ಕರೆಯಲಾಗುತ್ತಿತ್ತು. ನಂತರ ಅದನ್ನು ನವೀಕರಣ ಮಾಡಲಾಗಿದೆ. ಬ್ಲಾಕ್ 2 ಕಟ್ಟಡವನ್ನು ಹೊಸದಾಗಿ ನಿರ್ಮಾಣ ಮಾಡಲಾಗಿದೆ. ಈ ಎರಡು ಬ್ಲಾಕ್ ಗಳ ಒಟ್ಟು ವಿಸ್ತೀರ್ಣ 15,600 ಚದರ ಮೀಟರ್ ಗಿಂತಲೂ ಹೆಚ್ಚಿದೆ.
ಮ್ಯೂಸಿಯಂನ ಪ್ರವೇಶದ ಮೊದಲ ಟಿಕೆಟ್ ಅನ್ನು ಪ್ರಧಾನಿ ಮೋದಿ ಖರೀದಿಸಿದರು. ಆನ್ ಲೈನ್ ಟಿಕೆಟ್‍ಗೆ 100 ರೂ. ನಿಗದಿ ಮಾಡಿದ್ದು, ಆಫ್ ಲೈನ್ ಟಿಕೆಟ್ ಗೆ 110 ರೂ. ದರವನ್ನು ನಿಗದಿ ಮಾಡಲಾಗಿದೆ. ವಿದೇಶಿ ಪ್ರಜೆಗಳಿಗೆ 750 ರೂ. ದರವನ್ನು ಇಡಲಾಗಿದೆ. 20ಕ್ಕಿಂತ ಹೆಚ್ಚಿನ ಗುಂಪಿನ ಸದಸ್ಯರು ಭೇಟಿ ನೀಡಿದರೆ ಶೇ.25ರಷ್ಟು ದರವನ್ನು ಕಡಿತ ಮಾಡಲಾಗುತ್ತದೆ. 5-12 ರವರೆಗಿನ ಮಕ್ಕಳಿಗೆ ಶೇ.50 ಟಿಕೆಟ್ ದರ ಕಡಿತ ಮಾಡಲಾಗುತ್ತದೆ.










