ಬಂಧನವಾಗಿದ್ದ ಬಿಜೆಪಿ ಶಾಸಕ ರಾಜಾ ಸಿಂಗ್‍ಗೆ ಜಾಮೀನು ಮಂಜೂರು…

48
firstsuddi

ಹೈದರಾಬಾದ್ : ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧನವಾಗಿದ್ದ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರಿಗೆ ಕೆಲವೇ ಗಂಟೆಗಳಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಅವರನ್ನ ನಾಂಪಲ್ಲಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ವಿಚಾರಣೆ ನಡೆಸಿದ ಕೋರ್ಟ್, ರಾಜಾ ಸಿಂಗ್ ಬಂಧನದ ಸಂದರ್ಭದಲ್ಲಿ ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ(ಸಿಆರ್‌ಪಿಸಿ) ಸೆಕ್ಷನ್ 41 ಅನ್ನು ಅನುಸರಿಸಿಲ್ಲ ಎಂಬುದನ್ನು ಗಮನಿಸಿದ ಬಳಿಕ ನ್ಯಾಯಾಲಯ ಅವರನ್ನು ಬಿಡುಗಡೆ ಮಾಡಲು ಆದೇಶಿಸಿದೆ.

ತೆಲಂಗಾಣದ ಗೋಶಾಮಹಲ್ ನ ಶಾಸಕ ರಾಜಾ ಸಿಂಗ್ ರಿಲೀಸ್ ಮಾಡಿದ್ದ ವಿಡಿಯೋದಲ್ಲಿ ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರು. ಇದು ಹೆಚ್ಚಿನ ವಿರೋಧಕ್ಕೆ ಕಾರಣವಾಗುತ್ತಿದ್ದಂತೆ ತಮಾಷೆಗಾಗಿ ಈ ರೀತಿ ಮಾಡಿರುವುದಾಗಿ ಹೇಳಿದ್ದರು. ಇದಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿತ್ತು. ಜೊತೆಗೆ ರಾಜಾ ಸಿಂಗ್ ವಿರುದ್ಧ ಐಪಿಸಿಯ 295 (ಎ), 153 (ಎ) ಸೇರಿದಂತೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಡಬೀರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ ಅವರನ್ನ ಬಂಧನ ಮಾಡಲಾಗಿತ್ತು. ಇದರ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು. ಇದರ ಜೊತೆಗೆ ಪಕ್ಷದಿಂದ ಏಕೆ ಉಚ್ಚಾಟನೆ ಮಾಡಬಾರದು ಎಂಬುದಕ್ಕೆ ಮುಂದಿನ 10 ದಿನದೊಳಗೆ ಉತ್ತರ ನೀಡುವಂತೆ ಸೂಚನೆ ನೀಡಿತ್ತು.