ಚಿಕ್ಕಮಗಳೂರು : ಅಪ್ರಾಪ್ತ ಬಾಲಕಿ ಬಟ್ಟೆ ಬದಲಿಸುವ ವೀಡಿಯೋ ಮಾಡಿಕೊಂಡು ಎರಡೂವರೆ ತಿಂಗಳಿನಿಂದ ನಿರಂತರ ಅತ್ಯಾಚಾರವೆಸಗಿರುವ ಅಮಾನವೀಯ ಘಟನೆ ಜಿಲ್ಲೆಯ ಕಡೂರು ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಹಳ್ಳಿಯೊಂದರಲ್ಲಿ ನಡೆದಿದೆ.
ಅಪ್ರಾಪ್ತೆ ಡ್ರೆಸ್ ಚೇಂಜ್ ಮಾಡುವ ವೀಡಿಯೋ ಮಾಡಿಕೊಂಡ ಅದೇ ಗ್ರಾಮದ ಯುವಕ ಆಕೆಗೆ ವೀಡಿಯೋ ತೋರಿಸಿ, ನಾನು ಕರೆದಾಗಲೆಲ್ಲ ಬರಬೇಕು. ಇಲ್ಲವಾದರೆ ಈ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದು, ಕಳೆದ ಎರಡೂವರೆ ತಿಂಗಳಿಂದ ಅತ್ಯಾಚಾರಗೈದಿದ್ದಾನೆ. ಅಲ್ಲದೇ ಅಪ್ರಾಪ್ತೆ ಮೇಲೆ ಅತ್ಯಾಚಾರಗೈಯಲು ತನ್ನ ಸ್ನೇಹಿತನ ಮನೆಯನ್ನೇ ಆರಿಸಿಕೊಂಡಿದ್ದನು ಎಂದು ಹೇಳಲಾಗಿದೆ. ಇದೀಗ ವಿಷಯ ಬೆಳಕಿಗೆ ಬಂದಿದ್ದು, ಪ್ರಮುಖ ಆರೋಪಿ ಸೇರಿದಂತೆ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತೆ ಡ್ರೆಸ್ ಚೇಂಜ್ ಮಾಡುವ ವೀಡಿಯೋ ಮಾಡಿಕೊಂಡಿದ್ದ ಆರೋಪಿ, ಇದನ್ನು ತನ್ನ ಸ್ನೇಹಿತರಿಗೂ ತೋರಿಸಿದ್ದ. ಹೀಗಾಗಿ ಬಾಲಕಿ ರಸ್ತೆಯಲ್ಲಿ ಓಡಾಡುವಾಗಲೂ ಆತನ ಸ್ನೇಹಿತರು ಚುಡಾಯಿಸುತ್ತಿದ್ದರು ಎನ್ನಲಾಗಿದೆ.
ಇತ್ತೀಚೆಗೆ ಗ್ರಾಮದಲ್ಲಿ ಗಣಪತಿ ವಿಸರ್ಜನಾ ಕಾರ್ಯಕ್ರಮವಿತ್ತು. ಅಂದು ಗಣಪತಿ ವಿಸರ್ಜನೆ ವೇಳೆ ಅಪ್ರಾಪ್ತೆ ಬಟ್ಟೆ ಬದಲಿಸುವ ವೀಡಿಯೋ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ವಿಷಯ ತಿಳಿದ ಸ್ಥಳೀಯರು ಬಾಲಕಿಯ ಚಿಕ್ಕಪ್ಪನ ಗಮನಕ್ಕೆ ತಂದಿದ್ದಾರೆ. ಆಗ ಬಾಲಕಿ ಚಿಕ್ಕಪ್ಪ ಕೇಳಿದಾಗ ನಡೆದ ವಿಷಯವನ್ನು ಹೇಳಿದ್ದಾಳೆ. ಕೂಡಲೇ ಸಖರಾಯಪಟ್ಟಣದ ಠಾಣೆಗೆ ದೂರು ನೀಡಿದ್ದಾರೆ. ನೊಂದ ಅಪ್ರಾಪ್ತೆ ದೂರು ನೀಡುತ್ತಿದ್ದಂತೆ ಅತ್ಯಾಚಾರಕ್ಕೆ ಮನೆ ನೀಡಿದ್ದವ ಹಾಗೂ ರಸ್ತೆಯಲ್ಲಿ ಚೇಷ್ಟೆ ಮಾಡುತ್ತಿದ್ದ ಇಬ್ಬರು ತಲೆಮರೆಸಿಕೊಂಡಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಹಾಗೂ ಮತ್ತೊಬ್ಬನನ್ನು ಸಖರಾಯಪಟ್ಟಣ ಪೊಲೀಸರು ಬಂಧಿಸಿದ್ದಾರೆ. ಸಖರಾಯಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










