ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ನಟ ವಾಸುಕಿ ವೈಭವ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದ ಗೆಳತಿ ಬೃಂದಾ ವಿಕ್ರಮ್ ಜೊತೆ ಅವರು ಹಸೆಮಣೆ ಏರುತ್ತಿದ್ದಾರೆ.
ವಾಸುಕಿ ವೈಭವ್ ಮತ್ತು ಬೃಂದಾ ವಿಕ್ರಮ್ ಅವರು ಹಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಬೃಂದಾ ವಿಕ್ರಮ್ ಅವರು ರಂಗಭೂಮಿ ಹಿನ್ನೆಲೆ ಹೊಂದಿದ್ದಾರೆ. ಶಿಕ್ಷಕಿ ಆಗಿಯೂ ಅವರು ಕೆಲಸ ಮಾಡುತ್ತಿದ್ದಾರೆ. ಹೆಚ್ಚಾಗಿ ಅವರು ಮಾಧ್ಯಮಗಳ ಎದುರು ಕಾಣಿಸಿಕೊಂಡಿಲ್ಲ. ವಾಸುಕಿ ಮತ್ತು ಬೃಂದಾ ಅವರು ತಮ್ಮ ಪ್ರೀತಿಯ ಬಗ್ಗೆ ಸಾರ್ವಜನಿಕವಾಗಿ ಹೆಚ್ಚೇನೂ ಹೇಳಿಕೊಂಡಿರಲಿಲ್ಲ. ಇದೀಗ ಇವರಿಬ್ಬರು ವೈವಾಹಿಕ ಜೀವನವನ್ನು ಆರಂಭಿಸಿದ್ದಾರೆ.
‘ಹೊಸ ಪಯಣ ಆರಂಭ ಆಗಿದೆ. ನಿಮ್ಮೆಲ್ಲರ ಆಶೀರ್ವಾದ ಮತ್ತು ಹಾರೈಕೆ ಬೇಕು’ ಎಂದು ವಾಸುಕಿ ವೈಭವ್ ಅವರು ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಬರೆದುಕೊಂಡಿದ್ದಾರೆ.
ವಾಸುಕಿ ವೈಭವ್ ಸದ್ಯ ಕನ್ನಡ ಚಿತ್ರರಂಗದ ಬೇಡಿಕೆಯ ನಿರ್ದೇಶಕರಲ್ಲೊಬ್ಬರು. 2016ರಲ್ಲಿ ತೆರೆಕಂಡ ‘ರಾಮಾ ರಾಮಾ ರೇ’ ಸಿನಿಮಾದ ಮೂಲಕ ಸಂಗೀತ ನಿರ್ದೇಶಕರಾಗಿ ಅವರು ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಆನಂತರ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಖ್ಯಾತಿ ಹೆಚ್ಚಾಯಿತು. ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಮಾತ್ರವಲ್ಲದೇ ನಟನಾಗಿಯೂ ಅವರು ಬೇಡಿಕೆ ಹೆಚ್ಚಿಸಿಕೊಂಡರು.
ಇತ್ತೀಚೆಗೆ ರಿಲೀಸ್ ಆದ ‘ಟಗರು ಪಲ್ಯ’ ಸಿನಿಮಾಗೆ ಸಂಗೀತ ನಿರ್ದೇಶನ ಮಾಡುವುದರ ಜೊತೆಗೆ ಒಂದು ಮುಖ್ಯವಾದ ಪಾತ್ರಕ್ಕೂ ಅವರು ಬಣ್ಣ ಹಚ್ಚಿದ್ದಾರೆ. ಇದೀಗ ಅವರು ದಾಂಪತ್ಯ ಜೀವನವನ್ನು ಶುರು ಮಾಡಿದ್ದಾರೆ. ನವದಂಪತಿಗೆ ಕನ್ನಡ ಚಿತ್ರರಂಗದ ಕಲಾವಿದರು ಶುಭಾಶಯ ತಿಳಿಸಿದ್ದಾರೆ.