ಚಿಕ್ಕಮಗಳೂರು: ಬಹುಸಂಖ್ಯಾತ ಶೋಷಿತ ಸಮುದಾಯ ದಾದಾ ಸಾಹೇಬ್ ಕಾನ್ಸೀರಾಂ ಅವರ ಆಶಯ ಮತ್ತು ಕನಸುಗಳನ್ನು ನನಸಾಗಿಸಲು ಮುಂದಾಗಬೇಕು ಎಂದು ಬಿ.ಎಸ್.ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ ಸಲಹೆ ನೀಡಿದರು.
ತಾಲೂಕಿನ ದೇವಗೊಂಡನಹಳ್ಳಿಯಲ್ಲಿ ಇಂದು ನಡೆದ ಬಹುಜನ ಸಮಾಜ ಪಕ್ಷದ ಸಂಸ್ಥಾಪಕ ದಾದಾ ಸಾಹೇಬ್ ಕಾನ್ಸೀರಾಂ ಅವರ ಜನ್ಮದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಬಹು ಸಂಖ್ಯಾತರಾದ ಶೋಷಿತರು ಸಮಾಜದ ಮುಖ್ಯ ವಾಹಿನಿಗೆ ಬರುವುದು, ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿಯುವುದು ದಾದಾ ಸಾಹೇಬರ ಕನಸು ಮತ್ತು ಆಶಯವಾಗಿತ್ತು. ಅದಕ್ಕಾಗಿ ಅವರು, ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸುವುದರ ಜೊತೆಗೆ ಸಹಸ್ರಾರು ಮೈಲಿ ಸೈಕಲ್‍ನಲ್ಲಿ ಸಂಚರಿಸಿ ಕೆಳ ವರ್ಗದ ಜನರಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದರು ಎಂದರು.
ಶೋಷಿತ ಸಮುದಾಯದ ಜನ ದಾದಾ ಸಾಹೇಬರ ಆಶಯವನ್ನು ಅರ್ಥಮಾಡಿಕೊಳ್ಳಬೇಕು. ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿಯಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.
ಬಿಎಸ್‍ಪಿ ರಾಜ್ಯ ಕಾರ್ಯದರ್ಶಿ ಪಿ.ಪರಮೇಶ್ ಮಾತನಾಡಿ, ಕೆಳ ವರ್ಗದ ಜನ ದಾದಾ ಸಾಹೇಬ್ ಕಾನ್ಸೀರಾಂ ಅವರು ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಿದರೆ ಮಾತ್ರ ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ತಿಳಿಸಿದರು.
ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಶೋಷಿತ ಸಮುದಾಯದ ಜನ ಮುಂಬರುವ ಚುನಾವಣೆಯಲ್ಲಿ ಆಸೆ ಆಮಿಷಗಳಿಗೆ ಬಲಿಯಾಗದೆ, ತಮ್ಮ ಮತಗಳನ್ನು ಬಹುಜನ ಸಮಾಜ ಪಕ್ಷದ ಅಭ್ಯರ್ಥಿಗಳಿಗೆ ನೀಡಬೇಕು ಎಂದು ಮನವಿ ಮಾಡಿದರು.
ಜನ್ಮ ದಿನದ ಪ್ರಯುಕ್ತ ದಾದಾ ಸಾಹೇಬ್ ಕಾನ್ಸೀರಾಂಅವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ಬಿಎಸ್‍ಪಿ ಜಿಲ್ಲಾ ಉಪಾಧ್ಯಕ್ಷ ಕೆ.ಆರ್.ಗಂಗಾಧರ್, ಅಸೆಂಬ್ಲಿ ಸಂಯೋಜಕಿ ಕೆ.ಎಸ್.ಮಂಜುಳಾ, ಹೊನ್ನಪ್ಪ, ಜಯಚಂದ್ರ ಉಪಸ್ಥಿತರಿದ್ದರು.










