ಬಾಗಿನ ಕೊಟ್ಟು ವಾಪಾಸ್ ಆಗುತ್ತಿದ್ದ ವೇಳೆ ಅಪಘಾತ – ತಂದೆ, ಮಗಳು ಸಾವು…

78
firstsuddi

ಚಿಕ್ಕಮಗಳೂರು : ಮಗಳಿಗೆ ಬಾಗಿನ ಕೊಟ್ಟು ವಾಪಾಸ್ ಆಗುತ್ತಿದ್ದ ವೇಳೆ ಗ್ಯಾಸ್ ಲಾರಿ ಹಾಗೂ ಟಿವಿಎಸ್ ನಡುವೆ ಅಪಘಾತ ಸಂಭವಿಸಿದ್ದು, ತಂದೆ-ಮಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಸಖರಾಯಪಟ್ಟಣ ಸಮೀಪದ ಉದ್ದೇಬೋರನಹಳ್ಳಿ ಬಳಿ ನಡೆದಿದೆ.

ಹಬ್ಬದ ದಿನವೇ ದುರ್ಘಟನೆ ಸಂಭವಿಸಿದ್ದು, ಜಯಣ್ಣ (58) ಹಾಗೂ ರಕ್ಷಿತಾ (19) ಮೃತ ದುರ್ದೈವಿಗಳಾಗಿದ್ದಾರೆ. ಮೃತ ಜಯಣ್ಣ ಮೂಲತಃ ತಾಲ್ಲೂಕಿನ ಮುಗುಳುವಳ್ಳಿ ಗ್ರಾಮದವರಾಗಿದ್ದು, ತಮ್ಮ ದೊಡ್ಡ ಮಗಳನ್ನ ಸಖರಾಯಪಟ್ಟಣ ಸಮೀಪದ ಪಿಳ್ಳೇನಹಳ್ಳಿಗೆ ಮದುವೆ ಮಾಡಿ ಕೊಟ್ಟಿದ್ದರು.

ಇಂದು ಗೌರಿ-ಗಣೇಶ ಹಬ್ಬದ ಪ್ರಯುಕ್ತ ಜಯಣ್ಣ ತನ್ನ ದೊಡ್ಡ ಮಗಳ ಮನೆಗೆ ಬಾಗಿನ ನೀಡಲೆಂದು ಚಿಕ್ಕ ಮಗಳು ರಕ್ಷಿತಾ ಜೊತೆ ಟಿವಿಎಸ್ ಬೈಕ್ ನಲ್ಲಿ ತೆರಳಿದ್ದರು. ಮಗಳಿಗೆ ಬಾಗಿನ ಕೊಟ್ಟು ಹಿಂದಿರುಗುವಾಗ ಉದ್ದೇಬೋರನಹಳ್ಳಿ ಬಳಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಹಾಗೂ ಟಿವಿಎಸ್ ಬೈಕ್ ಡಿಕ್ಕಿಯಾಗಿ ತಂದೆ-ಮಗಳಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿಯೂ ಸಹ ಪಲ್ಟಿಯಾಗಿದ್ದು, ಅದೃಷ್ಟವಶಾತ್ ಹೆಚ್ಚಿನ ಅನಾಹುತ ಸಂಭವಿಸಿಲ್ಲ. ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ಸಖರಾಯಪಟ್ಟಣ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.