ಚಿಕ್ಕಮಗಳೂರು : ಉತ್ತಮ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಸೊಪ್ಪು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು : ಜಯರಾಂ.

103
firstsuddi

ಚಿಕ್ಕಮಗಳೂರು : ಉತ್ತಮ ಆರೋಗ್ಯಕ್ಕಾಗಿ ವಿದ್ಯಾರ್ಥಿಗಳು ಸೊಪ್ಪು ಮತ್ತು ತರಕಾರಿಗಳನ್ನು ಹೆಚ್ಚು ಸೇವಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಜಯರಾಂ ಸಲಹೆ ಮಾಡಿದರು.

ನಗರದ ಆಜಾದ್‍ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಒಂದು ತಿಂಗಳ ಕಾಲದ ರಾಷ್ಟ್ರೀಯ ಪೋಷಣ್ ಅಭಿಯಾನಕ್ಕೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಸೊಪ್ಪು, ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸುವುದರಿಂದ ಆರೋಗ್ಯ ವೃದ್ದಿಸುತ್ತದೆ. ದೇಹ ಸದೃಢವಾಗುತ್ತದೆ ಎಂದ ಅವರು ವಿದ್ಯಾರ್ಥಿಗಳು ಇದನ್ನು ಅರಿಯಬೇಕು. ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಶಾಲೆಗೆ ಮತ್ತು ಪೋಷಕರಿಗೆ ಕೀರ್ತಿ ತರಬೇಕು ಎಂದು ಕಿವಿಮಾತು ಹೇಳಿದರು.

ಬಿಸಿಯೂಟ ಯೋಜನೆಯಡಿ ವಿದ್ಯಾರ್ಥಿಗಳಿಗೆ ಪಡಿತರವನ್ನು ವಿತರಿಸಿ ಮಾತನಾಡಿದ ಅಕ್ಷರ ದಾಸೋಹ ಸಹಾಯಕ ಅಧಿಕಾರಿ ಉದಯ್‍ಕುಮಾರ್ ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಸವಲತ್ತುಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದೈಹಿಕ ಶಿಕ್ಷಕ ಎಸ್.ವಿ.ಲೋಕೇಶ್ವರಚಾರ್ ರಾಷ್ಟ್ರೀಯ ಪೋಷಣ್ ಅಭಿಯಾನದ ಅಂಗವಾಗಿ ಒಂದು ತಿಂಗಳ ಕಾಲ ವಿದ್ಯಾರ್ಥಿಗಳಿಗೆ ಸೊಪ್ಪು, ತರಕಾರಿ ಮತ್ತು ಹಾಲಿನ ಮಹತ್ವವನ್ನು ತಿಳಿಸಲಾಗುವುದು. ತರಕಾರಿ ಬೆಳೆಯುವ ವಿಧಾನವನ್ನು ಕಲಿಸಲಾ ಗುವುದು ಎಂದು ತಿಳಿಸಿದರು.

ಶಿಕ್ಷಕಿ ಸಾವಿತ್ರಿ ತರಕಾರಿ ಮತ್ತು ಧಾನ್ಯಗಳಲ್ಲಿರುವ ಪೋಷಕಾಂಶಗಳು ಹಾಗೂ ಅವುಗಳನ್ನು ಸೇವಿಸುವುದರಿಂದ ಆಗುವ ಲಾಭಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ನೋಟ್‍ಬುಕ್ ಮತ್ತು ಸಮವಸ್ತ್ರವನ್ನು ವಿತರಿಸಲಾಯಿತು. ಮುಖ್ಯ ಶಿಕ್ಷಕಿ ಬಿ.ಆರ್.ಗೀತಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ನಾಗವೇಣಿ, ಭಾರತ ಸೇವಾದಳದ ಜಿಲ್ಲಾ ಸಂಘಟಕ ಚಂದ್ರಕಾಂತ್ ಉಪಸ್ಥಿತರಿದ್ದರು.