ಬೆಂಗಳೂರು : ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟಕ್ಕೆ ಅಂತ್ಯ ಹಾಡಲು ಮುಂದಾಗಿರುವ ಹೈಕಮಾಂಡ್, ಬಿಜೆಪಿಯ ಎಲ್ಲಾ ನಾಯಕರನ್ನು ಮತ್ತೆ ಒಗ್ಗೂಡಿಸುವ ಪ್ರಯತ್ನ ನಡೆಸಿದೆ. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಶಾಸಕರ ಜೊತೆ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್ ಅವರು ಮಾತುಕತೆ ನಡೆಸಿದರು. ಪಕ್ಷದ ಈಗಿನ ಸ್ಥಿತಿ ಉತ್ತಮವಾಗಿಲ್ಲ. ದಯವಿಟ್ಟು ಇದನ್ನು ಮೊದಲು ಸರಿಪಡಿಸಬೇಕಿದೆ ಎಂದು ಮನವಿ ಮಾಡಿದ್ದಾರೆ. ಪ್ರತಿ ಶಾಸಕರ ಜೊತೆ ರಾಧಾಮೋಹನ್ ದಾಸ್ ಪ್ರತ್ಯೇಕ ಚರ್ಚೆ ನಡೆಸಿದ್ದು, ಯಾವುದೇ ಬಣದಲ್ಲಿ ಗುರುತಿಸಿಕೊಳ್ಳದೆ ತಟಸ್ಥ ನಿಲುವು ಹೊಂದಿರುವ ಶಾಸಕರು ಅಗರವಾಲ್ ಅವರನ್ನು ಭೇಟಿ ಮಾಡಿದರು. ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ.ವೈ ವಿಜಯೇಂದ್ರ ಅವರಿಗೂ ಸ್ವಲ್ಪ ಅವಕಾಶ ಕೊಡಬೇಕೆಂಬುದು ಬಹುತೇಕ ಮುಖಂಡರ ಅಭಿಪ್ರಾಯವಾಗಿದೆ. ಪಕ್ಷಕ್ಕೆ ಶಕ್ತಿ ಇದ್ದರೆ ಈಗಿನ ಪರಿಸ್ಥಿತಿಯನ್ನು ಸರಿಪಡಿಸಿ ಎಂದು ರಾಧಾ ಮೋಹನ್ ದಾಸ್ ಅಗರವಾಲ್ ಅವರಿಗೆ ಬಿಜೆಪಿ ಶಾಸಕರು ಮನವಿ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಬಿಜೆಪಿಯ ರೆಬಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಚಾರವನ್ನು ಬಿ.ವೈ ವಿಜಯೇಂದ್ರ ಬಣದ ಕೆಲವು ಶಾಸಕರು ಪ್ರಸ್ತಾಪಿಸುತ್ತಿದ್ದಂತೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ಸಿಟ್ಟಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಯತ್ನಾಳ್ ಮಾಡುತ್ತಿರುವುದು ತಪ್ಪು ಎಂಬುದು ನಿಜ. ಅದನ್ನು ನೋಡಿಕೊಳ್ಳಲು ಪಕ್ಷ ಇದೆ. ಎಲ್ಲವೂ ಹೈಕಮಾಂಡ್ ಗಮನದಲ್ಲಿದೆ. ಎಲ್ಲವೂ ಸರಿ ಹೋಗುತ್ತದೆ. ಗುಂಪುಗಾರಿಕೆಯನ್ನು ಮೊದಲು ಬಿಡಿ ಎಂದು ಹೇಳಿದ್ದಾರೆ.










