ಬೆಂಗಳೂರು: ಬಸ್‍ಗಾಗಿ ಕಾಯುತ್ತಿದ್ದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಇಬ್ಬರು ಆರೋಪಗಳನ್ನು ಕೇಂದ್ರ ವಿಭಾಗದ ಮಹಿಳಾ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಇಬ್ಬರ ವಿರುದ್ಧ ಈಗಾಗಲೇ ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ 2 ಪ್ರಕರಣಗಳಿರುವುದಾಗಿ ತಿಳಿದುಬಂದಿದೆ. ಜನವರಿ 19ರಂದು ರಾತ್ರಿ ಸುಮಾರು 11.30ಕ್ಕೆ ಕೆ.ಆರ್ ಮಾರುಕಟ್ಟೆ ಗೋಡೌನ್ ಸ್ಟ್ರೀಟ್ ನಲ್ಲಿ ತಮಿಳುನಾಡು ಮೂಲದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ, ಹಣ, ಚಿನ್ನದ ತಾಳಿ, ಓಲೆ, ಹಾಗೂ ಮೊಬೈಲ್ ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದರು. ಈ ಸಂಬಂಧ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿಲಾಗಿದೆ. ಹಲವು ವರ್ಷಗಳ ಹಿಂದೆಯೇ ಕುಟುಂಬದಿಂದ ದೂರವಾಗಿರುವ ಇಬ್ಬರು ಆರೋಪಿಗಳು ಕೆ.ಆರ್ ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಸಿಸಿಟಿವಿ ದೃಶ್ಯಾವಳಿ ನೋಡಿದ ಬಳಿಕ ಇಬ್ಬರು ಕಾಮುಕರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.










