ಬಿಜೆಪಿ ರಾಜಕಾರಣವನ್ನು ಉದ್ಯಮವನ್ನಾಗಿ ಮಾಡಿಕೊಂಡಿದೆ:ಹೋದಿಗೆರೆ ರಮೇಶ್.

254

ಚಿಕ್ಕಮಗಳೂರು : ಭಾರತೀಯ ಜನತಾ ಪಕ್ಷ ರಾಜಕಾರಣವನ್ನು ವ್ಯವಹಾರವನ್ನಾಗಿ ಮಾಡಿಕೊಂಡಿದೆ ಎಂದು ಜೆಡಿಎಸ್ ಪ.ಜಾತಿ/ಪ.ವರ್ಗ ವಿಭಾಗದ ರಾಜ್ಯಾಧ್ಯಕ್ಷ ಹೋದಿಗೆರೆ ರಮೇಶ್ ಆರೋಪಿಸಿದರು.
ನಗರದ ಎಐಟಿ ವೃತ್ತದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಇಂದು ನಡೆದ ಜೆಡಿಎಸ್ ರಾಜ್ಯ ವೀಕ್ಷಕರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ರಾಜಕಾರಣವನ್ನು ಉದ್ಯಮವನ್ನಾಗಿ ಮಾಡಿಕೊಂಡಿರುವುದರಿಂದಾಗಿ ಬಂಡವಾಳವನ್ನು ಹಾಕಿ ಬಂಡವಾಳವನ್ನು ತೆಗೆಯುವ ಕೆಲಸ ಮಾಡುತ್ತಿದೆ ಆ ಮೂಲಕ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬರುತ್ತಿದೆ ಎಂದು ದೂರಿದರು.
ಬಿಜೆಪಿಯವರಿಗೆ ಬಡವರು, ಮಧ್ಯಮವರ್ಗದವರು, ದಲಿತರು ಬೇಕಾಗಿಲ್ಲ ಹಾಗಾಗಿ ಆ ಪಕ್ಷ ಗೊಬ್ಬರಕ್ಕೆ ಸಬ್ಸಿಡಿ ನೀಡದೇ ಕಾರ್ಪೋರೇಟ್‍ಗಳಿಗೆ ಲಕ್ಷ ಲಕ್ಷ ಕೋಟಿ ಸಬ್ಸಿಡಿ ನೀಡುತ್ತಿದೆ. ಬಿಜೆಪಿ ಯವರು ಜನ ಸೇವೆ ಮಾಡುವ ಬದಲು ರಾಜ್ಯದ ಲೂಟಿ ಮಾಡುತ್ತಿದ್ದಾರೆ ಎಂದ ಅವರು ಜೆಡಿಎಸ್ ಕಾರ್ಯಕರ್ತರು ಇದರ ವಿರುದ್ದ ಹೋರಾಟ ನಡೆಸಬೇಕು, ಮುಂದಿನ ಚುನಾವಣೆಯಲ್ಲಿ ಆ ಪಕ್ಷವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು.
ಹರಿಹರ ಮಾಜಿ ಶಾಸಕ. ಜಿಲ್ಲಾ ವೀಕ್ಷಕ ಹೆಚ್.ಎಸ್.ಶಿವಶಂಕರ್ ಮಾತನಾಡಿ ಇಂದು ರಾಜಕಾರಣದಲ್ಲಿ ಜಾತಿ ತಾಂಡವವಾಡುತ್ತಿದೆ, ಹಣ ಮೇಲುಗೈ ಸಾಧಿಸಿದೆ ಇಂದಿನ ಸನ್ನಿವೇಶದಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುವ ಹೊಣೆಗಾರಿಕೆ ಕಾರ್ಯಕರ್ತರ ಮೇಲಿದೆ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಮತ್ತು ಅವರನ್ನು ಗೆಲ್ಲಿಸುವ ಮಹತ್ತರ ಜವಾಬ್ದಾರಿ ಕಾರ್ಯಕರ್ತರದಾಗಿದೆ ಎಂದರು.
ರಾಜ್ಯದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ, 2023ರ ಚುನಾವಣೆಯಲ್ಲಿ ಹೆಚ್.ಡಿ.ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಅದಕ್ಕಾಗಿ ಈಗಿನಿಂದಲೇ ಕಾರ್ಯಕರ್ತರು ಪಕ್ಷವನ್ನು ಗಟ್ಟಿಗೊಳಿಸಬೇಕು ಎಂದು ಮನವಿ ಮಾಡಿದರು.
ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಭವಿಷ್ಯ ಕಾರ್ಯಕರ್ತರ ಕೈಯಲ್ಲಿದೆ ಹಾಗಾಗಿ ನಮ್ಮಲ್ಲಿರುವ ತಪ್ಪುಗಳನ್ನು ತಿದ್ದಿಕೊಂಡು ಮತ್ತೆ ನಾವು ಬಲವಾಗಿ ಬೆಳೆಯಬೇಕು, ಪ್ರತಿ ಬೂತ್ ಮಟ್ಟದಲ್ಲೂ ಸಮಿತಿಗಳನ್ನು ರಚಿಸಬೇಕು ಎಂದು ಸೂಚಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಕಳಸ ತಾಲ್ಲೂಕನ್ನು ಘೋಷಣೆ ಮಾಡಿದವರು ಮಾಜಿ ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಾದರೂ ಕಾಂಗ್ರೇಸ್‍ನವರು ಆಗ ಪತ್ತೆಯಿಲ್ಲದಿದ್ದ ವಿಧಾನ ಪರಿಷತ್ ಸದಸ್ಯ ಎಂ.ಕೆ.ಪ್ರಾಣೇಶ್ ಅವರನ್ನು ಸನ್ಮಾನಿಸಿರುವುದು ಅವರ ದಿವಾಳಿತನದ ಸಂಕೇತವಾಗಿದೆ ಎಂದರು.
ಜೆಡಿಎಸ್ ಜಿಲ್ಲಾ ಮಹಾಪ್ರಧಾನ ಕಾರ್ಯದರ್ಶಿ ಜಿ.ಎಸ್.ಚಂದ್ರಪ್ಪ ಮಾತನಾಡಿ ಕ್ಷೇತ್ರ ಸಮಿತಿಗಳು ತೆಗೆದುಕೊಳ್ಳುವ ನಿರ್ಣಯಗಳನ್ನು ರಾಜ್ಯ ಸಮಿತಿ ಪರಿಗಣಿಸಬೇಕು, ಕ್ಷೇತ್ರ ಸಮಿತಿಗಳು ಆಯ್ಕೆ ಮಾಡಿದವರನ್ನೇ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಬೇಕು ಎಂದು ಸಲಹೆ ಮಾಡಿದರು.
ವಿಧಾನ ಪರಿಷತ್ ಮಾಜಿ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಸೇರಿದಂತೆ ಇತ್ತೀಚೆಗೆ ನಿಧನರಾದ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್‍ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಶ್ರೀಕಾಂತ್, ಚಿತ್ರದುರ್ಗ ಜಿಲ್ಲಾಧ್ಯಕ್ಷ ಯಶೋಧರ, ಕೊಡಗು ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಜಿಲ್ಲಾ ವೀಕ್ಷಕಿ ನಜ್ಮಾ ನಜೀóರ್, ಜಿಲ್ಲಾ ಪದಾಧಿಕಾರಿಗಳಾದ ಎಂ.ಎಸ್.ಬಾಲಕೃಷ್ಣೇಗೌಡ, ಹೊಲದಗದ್ದೆ ಗಿರೀಶ್, ಎಂ.ಡಿ.ರಮೇಶ್, ವಿನಯ್‍ರಾಜ್, ಡಿ.ಜೆ.ಸುರೇಶ್ ಉಪಸ್ಥಿತರಿದ್ದರು.