ಶಿರಸಿ: ವಿಜಯನಗರ ಜಿಲ್ಲೆಯ ಕೂಡ್ಲಿಗಿ ಬಿಜೆಪಿ ಶಾಸಕ ಎನ್.ವೈ.ಗೋಪಾಲಕೃಷ್ಣ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗೋಪಾಲಕೃಷ್ಣ ಅವರು ಇಂದು ಶಿರಸಿಯಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.
ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ವಯಸ್ಸಾಗಿದೆ. ನನ್ನ ವಯಸ್ಸು 72. ಆರೋಗ್ಯದ ಸಮಸ್ಯೆ ಇರುವುದರಿಂದ ಭವಿಷ್ಯದಲ್ಲಿ ಯಾವುದೇ ರಾಜಕೀಯ ಚಟುವಟಿಕೆಯ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಾಲ್ಕೂ ಬಾರಿ ಮೊಣಕಾಲ್ಮೂರು ಹಾಗೂ ಬಳ್ಳಾರಿಯಲ್ಲಿ ಶಾಸಕನಾಗಿದ್ದೆ. ನಂತರ ಬಿಜೆಪಿಗೆ ಸೇರಿಕೊಂಡು ಕುಡ್ಲಗಿಗೆ ಬಂದು ಐದು ವರ್ಷ ಶಾಸಕನಾಗಿ ಅಲ್ಲಿನ ಜನರಿಗಾಗಿ ನನ್ನ ಬದ್ಧತೆ ಏನಿತ್ತು, ಹಾಗೂ ನಾನು ರಾಜಕೀಯಕ್ಕೆ ಬರುವ ಮೊದಲು ಏನೆಂದುಕೊಂಡಿದ್ದೇನೋ ಅವೆಲ್ಲವನ್ನೂ ಪೂರ್ತಿಗೊಳಿಸಿದ್ದೇನೆ ಎಂದು ಹೇಳಿದರು.
ಬೇರೆ ಪಕ್ಷಕ್ಕೆ ಸೇರುವ ಕುರಿತು ಪಕ್ಷದವರು ಮಾತನಾಡುತ್ತಾರೆ ಅದಕ್ಕೆ ನಾನೇನು ಹೇಳಲಾಗದು ನಾನು ಯಾವುದೇ ಪಕ್ಷ ಸೇರ್ಪಡೆಯಾಗುತ್ತಿಲ್ಲ. ನಾನು ಸಂಪೂರ್ಣವಾಗಿ ರಾಜಕೀಯ ಜೀವನದಿಂದ ನಿವೃತ್ತಿ ಪಡೆಯುವ ದೃಷ್ಠಿ ಇಟ್ಟುಕೊಂಟು ರಾಜೀನಾಮೆ ನೀಡಿದ್ದೇನೆ. ನಾನು 6 ಬಾರಿ ಶಾಸಕನಾದರೂ ನನಗೆ ಮಂತ್ರಿ ಸ್ಥಾನ ನೀಡಿಲ್ಲ. ಬಿಜೆಪಿಯೂ ನೀಡಿಲ್ಲ, ಕಾಂಗ್ರೆಸ್ ಸಹ ನೀಡಿಲ್ಲ . ಇದರ ಬಗ್ಗೆ ಅಸಮಾಧಾನವಿದೆ. ಅಲ್ಲದೇ ಮಕ್ಕಳು ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ. ಕ್ಷೇತ್ರದ ಜನರು ಬೇರೆಯವರಿಗೆ ಅವಕಾಶ ನೀಡಿ ಎಂದು ಕೇಳುತ್ತಿದ್ದಾರೆ ಎಂದರು.
ನನ್ನ ಜಿಲ್ಲೆ ಚಿತ್ರದುರ್ಗ, ನಾನು ನಾಲ್ಕೂ ಬಾರಿ ಶಾಸಕನಾದ ಮೊಣಕಾಲ್ಮೂರು ನನ್ನ ವಿಧಾನಸಭಾ ಕ್ಷೇತ್ರ. ಈಗಲೂ ನಾನು ಮತ್ತೆ ವಿಧಾನಸಭಾ ಚುನಾವಣೆಗೆ ನಿಂತರೆ ಗೆಲ್ಲುತ್ತೇನೆ ಅದರಲ್ಲಿ ಎರಡೂ ಮಾತಿಲ್ಲ ಎಂದು ಹೇಳಿದ್ದಾರೆ.










