ಬಿಪಿಎಲ್ ಕಾರ್ಡ್‍ಗಳ ಪರಿಷ್ಕರಣೆ ತಾತ್ಕಾಲಿಕವಾಗಿ ನಿಲ್ಲಿಸಿದ ಸರ್ಕಾರ.

34

ಬೆಂಗಳೂರು: ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‍ಗಳ ಪರಿಷ್ಕರಣೆ ವ್ಯಾಪಕ ವಿರೋಧ ಮತ್ತು ಟೀಕೆಗಳಿಗೆ ಎಡೆ ಮಾಡಿಕೊಟ್ಟಿದ್ದರಿಂದ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ, ಕಾರ್ಡ್‍ಗಳ ಪರಿಷ್ಕರಣೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆ. ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಸಚಿವ ಕೆ.ಹೆಚ್.ಮುನಿಯಪ್ಪ, ಸದ್ಯಕ್ಕೆ ಕಾರ್ಡ್‍ಗಳ ಪರಿಷ್ಕರಣೆಯನ್ನು ಕೈಬಿಡಲಾಗಿದೆ. ಸರ್ಕಾರಿ ನೌಕರರು ಮತ್ತು ಆದಾಯ ತೆರಿಗೆ ಪಾವತಿದಾರರನ್ನು ಹೊರತುಪಡಿಸಿದರೆ, ಉಳಿದೆಲ್ಲ ಕಾರ್ಡ್‍ಗಳೂ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ಮುಂದಿನ ದಿನಗಳಲ್ಲಿ ಪರಿಷ್ಕರಣೆಗೆ ಒಳಪಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವವರೆಗೂ ಯಾವುದೇ ಬದಲಾವಣೆ ಇರುವುದಿಲ್ಲ. ಎಲ್ಲ ಕಾರ್ಡ್‍ಗಳು ಯಥಾಸ್ಥಿತಿಯಲ್ಲೇ ಮುಂದುವರೆಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗಾಗಲೇ ಪರಿಷ್ಕರಣೆಗೆ ಒಳಪಟ್ಟು, ಅಮಾನತುಗೊಂಡಿರುವ ಕಾರ್ಡ್‍ಗಳನ್ನು ಒಂದು ವಾರದೊಳಗಾಗಿ ನೀಡಿ ಅಕ್ಕಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಬಡವರಿಗೆ ಅನ್ಯಾಯವಾಗದಂತೆ ಎಚ್ಚರಿಕೆ ವಹಿಸುವುದಾಗಿ ತಿಳಿಸಿದರು.
ಈ ಬಿಪಿಎಲ್ ಕಾರ್ಡ್‍ಗಳನ್ನು ರದ್ದು ಮಾಡುವ ತೀರ್ಮಾನ ತೆಗೆದುಕೊಂಡಿದ್ದೇವೆ. ಉಳಿದಂತೆ ಯಾವುದೇ ಕಾರ್ಡ್‍ಗಳು ರದ್ದುಗೊಳ್ಳದೇ 2 ತಿಂಗಳ ಮೊದಲಿದ್ದಂತೆ ಯಥಾಸ್ಥಿತಿಯಲ್ಲಿ ಮುಂದುವರೆಯಲಿವೆ. ತಾತ್ಕಾಲಿಕವಾಗಿ ಅಮಾನತುಗೊಂಡಿರುವ ಕಾರ್ಡ್‍ಗಳನ್ನು ಒಂದು ವಾರದೊಳಗಾಗಿ ಲಾಗಿನ್‍ಗೆ ಒಳಪಡಿಸಿ ಮುಂದಿನ ವಾರದಿಂದ ಅಕ್ಕಿ ವಿತರಣೆ ಮಾಡಲಾಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು.