ಬೆಂಗಳೂರು:ವಾರ್ ರೂಮ್‌ ಗೆ ತೆರಳಿ ಕ್ಷಮೆಯಾಚಿಸಿದ ಸಂಸದ ತೇಜಸ್ವಿ ಸೂರ್ಯ…

238

ಬೆಂಗಳೂರು: ಬಿಬಿಎಂಪಿಯ ದಕ್ಷಿಣ ವಲಯದ ಕೋವಿಡ್ ವಾರ್ ರೂಮ್‌ಗೆ ಗುರುವಾರ ಸಂಜೆ ಭೇಟಿ ನೀಡಿದ ಸಂಸದ ತೇಜಸ್ವಿ ಸೂರ್ಯ ಅಲ್ಲಿನ ಮುಸ್ಲಿಂ ಸಿಬ್ಬಂದಿಯ ಕ್ಷಮೆ ಕೋರಿದ್ದಾರೆ.

ಬೆಡ್ ಬ್ಲಾಕಿಂಗ್ ಹಗರಣವನ್ನು ಬಯಲಿಗೆಳೆದಿದ್ದ ತೇಜಸ್ವಿ ಸೂರ್ಯ, ಈ ವೇಳೆ 17 ಮುಸ್ಲಿಂ ನೌಕರರ ಹೆಸರು ಮಾತ್ರ ಉಲ್ಲೇಖಿಸಿ ನೇರ ಆರೋಪ ಮಾಡಿದ್ದರು. ಆದರೆ, 200ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುವ ಈ ವಾರ್ ರೂಮ್‌ನ ಹಾಸಿಗೆ ನಿಯೋಜನೆ ವಿಭಾಗದಲ್ಲಿ ಒಬ್ಬ ಮುಸ್ಲಿಂ ಯುವಕ ಮಾತ್ರ ಕೆಲಸ ಮಾಡುತ್ತಿದ್ದರು. ಬೆಡ್ ಬ್ಲಾಕಿಂಗ್ ಹಗರಣಕ್ಕೂ ಉದ್ದೇಶಪೂರ್ವಕವಾಗಿ ಕೋಮು ಬಣ್ಣ ನೀಡಿದ್ದಾರೆ ಎಂದು ಸಂಸದರ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.

ಈ ಪ್ರಕರಣವನ್ನು ಯಾರೂ ವೈಯಕ್ತಿಕವಾಗಿ ತೆಗೆದುಕೊಳ್ಳಬೇಡಿ. ಬೆಡ್ ಬ್ಲಾಕಿಂಗ್ ಹಗರಣದ ಬಗ್ಗೆ ತನಿಖೆ ನಡೆಸುವುದು ಮಾತ್ರ ನನ್ನ ಉದ್ದೇಶವಾಗಿತ್ತು. ಈ ವೇಳೆ ನನ್ನ ಮಾತು ಅಥವಾ ನಡೆಯಿಂದ ಯಾವುದೇ ಸಮುದಾಯಕ್ಕೆ ಇದರಿಂದ ನೋವಾಗಿದ್ದರೆ ನಾನು ಕ್ಷಮೆ‌ ಕೋರುತ್ತೇನೆ’ ಎಂದು ತೇಜಸ್ವಿ ಸೂರ್ಯ ಹೇಳಿದರು ಎಂಬುದಾಗಿ ಸಿಬ್ಬಂದಿ ಹೇಳಿದರು.

ಪ್ರಕರಣದ ನಂತರ, ವಾರ್ ರೂಮ್ ನ ಹಲವು ಸಿಬ್ಬಂದಿ ರಜೆ ತೆಗೆದುಕೊಂಡಿದ್ದಾರೆ.‌ ಈ ತುರ್ತು ಸಂದರ್ಭದಲ್ಲಿ ರಜೆ ಹಾಕಿದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಬೆಡ್ ಬ್ಲಾಕಿಂಗ್ ದಂಧೆಯಲ್ಲಿ ತೊಡಗಿಕೊಂಡವರ ವಿರುದ್ಧ ಮಾತ್ರ ನಾವು ಕ್ರಮ ಕೈಗೊಳ್ಳುತ್ತೇವೆ. ಉಳಿದವರು ಆತಂಕ ಪಡುವ ಅಗತ್ಯವಿಲ್ಲ. ಎಲ್ಲರೂ ಕರ್ತವ್ಯಕ್ಕೆ ಹಾಜರಾಗಿ ಎಂದೂ ಅವರು ಮನವಿ‌ ಮಾಡಿಕೊಂಡರು ಎಂದು ಸಿಬ್ಬಂದಿ ಹೇಳಿದರು.