ಭಾರತೀಯರನ್ನು ಸ್ಥಳಾಂತರಿಸಲು ಉಕ್ರೇನ್ ನೆರೆಯ ರಾಷ್ಟ್ರಗಳಿಗೆ ತೆರಳಲಿದ್ದಾರೆ ನಾಲ್ವರು ಸಚಿವರು.

84
firstsuddi

ನವದೆಹಲಿ : ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆ ತರಲು ನಾಲ್ವರು ಕೇಂದ್ರ ಸಚಿವರು ಉಕ್ರೇನ್ ನ ನೆರೆ ರಾಷ್ಟ್ರಗಳಿಗೆ ತೆರಳಲಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿಂದು ಸಚಿವರು, ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆದಿದ್ದು, ಉಕ್ರೇನ್ ಬಿಕ್ಕಟ್ಟಿನ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಸಿದ್ದಾರೆ. ಈ ವೇಳೆ ಕೇಂದ್ರ ಸಚಿವರಾದ ಹರ್ದೀಪ್ ಪುರಿ, ಜ್ಯೋತಿರಾದಿತ್ಯ ಸಿಂಧಿಯಾ, ಕಿರಣ್ ರಿಜಿಜು ಮತ್ತು ವಿ.ಕೆ. ಸಿಂಗ್ ಅವರು ಭಾರತದ ವಿಶೇಷ ರಾಯಭಾರಿಗಳಾಗಿ ಉಕ್ರೇನ್ ಸುತ್ತಮುತ್ತಲಿನ ದೇಶಗಳಿಗೆ ತೆರಳಿ ಭಾರತೀಯರು ಸ್ಥಳಾಂತರಗೊಳ್ಳಲು ಸಹಾಯ ಮಾಡಲಿದ್ದಾರೆ ಎಂದು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಸಭೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದರು.

ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿಕೊಂಡಿರುವ ಭಾರತೀಯರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ‘ಆಪರೇಷನ್ ಗಂಗಾ’ದಡಿ ನಡೆಸಲಾಗುತ್ತಿರುವ ಈ ವಿಶೇಷ ಕಾರ್ಯಾಚರಣೆಯ 5ನೇ ವಿಮಾನ ಉಕ್ರೇನ್ನಿಂದ 249 ಭಾರತೀಯರನ್ನು ಹೊತ್ತು ಇಂದು ಬೆಳಗ್ಗೆ ದೆಹಲಿಗೆ ಬಂದಿಳಿದಿದೆ.