ಮಂಕಿಪಾಕ್ಸ್ ಆತಂಕ ; ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ…

54
firstsuddi

ನವದೆಹಲಿ : ದೇಶದಲ್ಲೂ ಮಂಕಿಪಾಕ್ಸ್ ಆತಂಕದ ಹಿನ್ನಲೆಯಲ್ಲಿ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಕಟ್ಟೆಚ್ಚರ ವಹಿಸಲಾಗಿದೆ.

ಈ ಕುರಿತು ಆರೋಗ್ಯ ಸಚಿವಾಲಯ ತುರ್ತು ಅದೇಶ ಹೊರಡಿಸಿದ್ದು, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳಂತೆ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಇದರಿಂದ ಮಂಕಿಪಾಕ್ಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದೆ.

ದುಬೈನಿಂದ ಬಂದಿದ್ದ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆಯಷ್ಟೇ ಮಂಕಿಪಾಕ್ಸ್ ತಗುಲಿರುವುದು ಪತ್ತೆಯಾಗಿತ್ತು. ಇದು ದೇಶದಲ್ಲಿ ಪತ್ತೆಯಾದ 2ನೇ ಪ್ರಕರಣವಾಗಿತ್ತು. ಇದಕ್ಕೂ ಮುನ್ನ ಕೇರಳದ ಕೊಲ್ಲಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ದೃಢಪಟ್ಟಿತ್ತು.

ಇನ್ನೊಂದೆಡೆ ಕೇರಳದಲ್ಲಿ ಇಬ್ಬರಿಗೆ ಮಂಕಿಪಾಕ್ಸ್ ದೃಢಪಟ್ಟಿದ್ದು, ಇದರಲ್ಲಿ ಎರಡನೇ ಸೋಂಕಿತ ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದರು ಎನ್ನುವ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ವಿದೇಶಿ ಪ್ರಯಾಣಿಕರ ಮೇಲೆ ನಿಗಾ ಇರಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೂಚನೆಯಂತೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸ್ಕ್ರೀನಿಂಗ್ ಆರಂಭಿಸಲಾಗಿದೆ. ವಿದೇಶದಿಂದ ಆಗಮಿಸುವ ಪ್ರಯಾಣಿಕರನ್ನು ಥರ್ಮಲ್ ಸ್ಕ್ರೀನಿಂಗ್ ಗೆ ಒಳಪಡಿಸಲಾಗುತ್ತಿದ್ದು, ಅವರು ತೆರಳುವ ಸ್ಥಳದ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳಲಾಗುತ್ತಿದೆ. ಅಲ್ಲದೇ ರೋಗ ಲಕ್ಷಣ ಪತ್ತೆಯಾದ ರೋಗಿಗಳನ್ನು ಆರೈಕೆ ಮಾಡಲು ಮಂಗಳೂರಿನಲ್ಲಿ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಐಸೋಲೇಸನ್ ವ್ಯವಸ್ಥೆ ಮಾಡಲಾಗಿದೆ.