ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮರವೂರು ಸೇತುವೆ ಬಿರುಕು…

78
firstsuddi

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ ಮರವೂರು ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ. ಸೇತುವೆಯ ಎರಡೂ ಕಡೆಗಳಲ್ಲಿ ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದು, ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ.

ಕರಾವಳಿಯಲ್ಲಿ ಮೂರು ದಿನದಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸೇತುವೆಯ ಪಿಲ್ಲರ್ ಸ್ವಲ್ಪ ಕುಸಿದಿದೆ. ಇದರಿಂದಾಗಿ ಮರವೂರು ಸೇತುವೆಯ ಒಂದು ಕಡೆ ಬಿರುಕು ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಭೇಟಿ ನೀಡಿದ್ದು, ಬ್ಯಾರಿಕೇಡ್ ಹಾಕಿ, ರಸ್ತೆಯನ್ನು ಬಂದ್ ಮಾಡಲು ಸೂಚಿಸಿದ್ದಾರೆ.

ಸದ್ಯ ಸೇತುವೆಯಲ್ಲಿ ಬಿರುಕು ಬಿದ್ದ ಕಾರಣ ಮಂಗಳೂರಿನ ಕಾವೂರಿನಿಂದ ಏರ್ ಪೋರ್ಟ್ ಗೆ ತೆರಳುವ ರಸ್ತೆ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಬಜಪೆ ವಿಮಾನ ನಿಲ್ದಾಣಕ್ಕೆ ಮಂಗಳೂರು ನಗರದಿಂದ ಬರುವವರು ನಂತೂರಿನಲ್ಲಿ ತಿರುವು ಪಡೆದು ಕುಲಶೇಖರ -ಗುರುಪುರ ರಸ್ತೆಯಾಗಿ ಎರ್ ಪೂರ್ಟ್ ಗೆ ತೆರಳಲು ಸೂಚನೆ ನೀಡಲಾಗಿದೆ. ಉಡುಪಿ ಕಡೆಯಿಂದ ಬರುವವರು ಮೂಲ್ಕಿಯಲ್ಲಿ ತಿರುವು ಪಡೆದು ಕಿನ್ನಿಗೋಳಿ-ಕಟೀಲು ರಸ್ತೆಯಾಗಿ ಏರ್ ಪೋರ್ಟ್ ತೆರಳಲು ಸೂಚನೆ ನೀಡಲಾಗಿದೆ.