ಮಂಗಳೂರು: ಜು.21ರಂದು ಪಿಲಿಕುಳದಲ್ಲಿ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ…

212
firstsuddi

ಮಂಗಳೂರು: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‍ನಲ್ಲಿ ಜುಲೈ 21 ರಂದು ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ತು ಪಿಲಿಕುಳ ನಿಸರ್ಗಧಾಮದ ಆಶ್ರಯದಲ್ಲಿ ಪಿಲಿಕುಳ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ ಕಾರ್ಯಕ್ರಮವು ನಡೆಯಲಿದೆ. ಇದೇ ಸಂದರ್ಭದಲ್ಲಿ ಕೆರೆಯಲ್ಲಿ ಮೀನು ಮರಿಗಳನ್ನು ಬಿಡುವ ಕಾರ್ಯಕ್ರಮವು ನಡೆಯಲಿದೆ.

ಈ ಕಾರ್ಯಕ್ರಮವು ಜಿಲ್ಲೆಯ ಮೀನು ಪ್ರಿಯರಿಗೆ ಸುವರ್ಣಾವಕಾಶವಾಗಿದೆ. ಈ ಹಬ್ಬದ ಅಂಗವಾಗಿ ಪಿಲಿಕುಳದ ಲೇಕ್ ಗಾರ್ಡನ್‍ನ ಕೆರೆಯಲ್ಲಿ ಬೆಳೆಸಿದ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ಹಾಗೂ ಇತರೆ ಮೀನುಗಳನ್ನು ಹಿಡಿದು, ಮುಗಿಯುವ ತನಕ ಸಾರ್ವಜನಿಕ ಹರಾಜು ಮಾಡಲಾಗುವುದು.ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದಿಂದ ಸಿಹಿ ನೀರಿನ ಮೀನುಗಳು, ಪಾಂಪ್ಲೆಟ್, ಅಂಜಲ್, ಬಂಗುಡೆ, ಸಿಗಡಿ, ಬೊಂಡಾಸು ಹಾಗೂ ಇನ್ನಿತರ ತಾಜಾ ಮೀನು ಮತ್ತು ಮೌಲ್ಯವರ್ಧಿತ ಮೀನು ಉತ್ಪನ್ನಗಳ ಮಾರಾಟದ ವ್ಯವಸ್ಥೆ ಮಾಡಲಾಗಿದೆ. ಅದೇ ರೀತಿ ತಾಜಾ ಸಮುದ್ರ ಮೀನುಗಳ ಫ್ರೈ, ಫಿಶ್ ಮಸಾಲಾ, ಫಿಶ್ ಕಬಾಬ್ ಹಾಗೂ ಇನ್ನಿತರ ಮೀನಿನ ಖಾದ್ಯಗಳನ್ನು ಶುಚಿ ರುಚಿಯಾಗಿ ಸ್ಥಳದಲ್ಲೇ ತಯಾರಿಸಿ ಮಾರಾಟ ಮಾಡಲಾಗುವುದು.

ವಿವಿಧ ರೀತಿಯ ಮೀನುಮರಿಗಳ ಮತ್ತು ಒಣ ಮೀನುಗಳ ಪ್ರದರ್ಶನ ಮತ್ತು ಮಾರಾಟ ಮತ್ತು ಅಲಂಕಾರಿಕಾ ಮೀನುಗಳ ಪ್ರದರ್ಶನ ಮತ್ತು ಮಾರಾಟ ಕೂಡಾ ಇದೆ.ಈ ಕಾರ್ಯಕ್ರಮಕ್ಕೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಕಾರ್ಯನಿರ್ವಾಹಕ ನಿರ್ದೇಶಕರು ಡಾ. ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಇವರ ಪ್ರಕಟಣೆ ತಿಳಿಸಿದೆ.