ಮಂಡ್ಯ: ವೈದ್ಯರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಮದ್ದೂರು ತಾಲ್ಲೂಕಿನ ಕುದುರಗುಂಡಿ ಗ್ರಾಮದಲ್ಲಿ ನಡೆದಿದೆ.
ಡಾ.ವೇಣುಗೋಪಾಲ್(57) ಆತ್ಮಹತ್ಯೆ ಮಾಡಿಕೊಂಡ ವೈದ್ಯರಾಗಿದ್ದಾರೆ. ಇವರು ಮಂಡ್ಯದ ಸಾಂಜೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಾಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಡಾ.ವೇಣುಗೋಪಾಲ್ ಎಂದಿನಂತೆ ನಿನ್ನೆ ಕೂಡ ಆಸ್ಪತ್ರೆಯಲ್ಲಿ ಹಲವು ಮಂದಿಗೆ ಚಿಕಿತ್ಸೆ ನೀಡಿದ್ದರು. ಅಂದೇ ರಾತ್ರಿ ಕುದುರಗುಂಡಿ ಗ್ರಾಮದ ಕೆರೆಯ ಬಳಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಳೆದ ವರ್ಷ ಇವರ ತಂಗಿ ಸಾವನ್ನಪ್ಪಿದ್ದರು. ಈ ಬೇಸರದ ನಡುವೆ ವೈದ್ಯ ವೃತ್ತಿಗೆ ಸಂಬಂಧಿಸಿದ ದಾಖಲೆಗಳ ಕೊರತೆ ಹಿನ್ನೆಲೆ ಆಗಾಗ ವಿಚಾರಣೆಗೆ ಹಾಜರಾಗುತ್ತಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದರು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಮದ್ದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ಶವವನ್ನು ರವಾನಿಸಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.










