ಮುಂಬೈ: ಹೆಚ್ಚುವರಿ ಲಗೇಜ್ಗೆ ಹಣ ಪಾವತಿಸುವಂತೆ ಕೇಳಿದ್ದಕ್ಕೆ ಮಹಿಳೆಯೊಬ್ಬಳು ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಕೂಗಾಡಿ ಎಲ್ಲರನ್ನು ಬೆಚ್ಚಿ ಬೀಳಿಸಿದ ಘಟನೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಹೆಚ್ಚುವರಿ ಲಗೇಜ್ ತಂದಿದ್ದ ಮಹಿಳೆಗೆ ಏರ್ಪೋರ್ಟ್ ಸಿಬ್ಬಂದಿ ಹಣ ನೀಡುವಂತೆ ಸೂಚಿಸಿದ್ದಾರೆ. ಈ ವೇಳೆ ಜಗಳಕ್ಕಿಳಿದ ಮಹಿಳೆಯೊಬ್ಬಳು ತನ್ನ ಬ್ಯಾಗ್ನಲ್ಲಿ ಬಾಂಬ್ ಇದೆ ಎಂದು ಬೆದರಿಸಿದ್ದಾಳೆ. ಕೂಡಲೆ ಸ್ಥಳಕ್ಕೆ ಬಂದ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ ಬ್ಯಾಗ್ಗಳನ್ನು ಪರಿಶೀಲಿಸಿದ್ದು, ಯಾವುದೇ ಅನುಮಾನಾಸ್ಪದ ವಸ್ತುಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ. ಇದರಿಂದ ವಿಮಾನ ನಿಲ್ದಾಣದಲ್ಲಿ ಕೆಲವು ಗಂಟೆಗಳ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಮಹಿಳೆಯ ವಿರುದ್ಧ ಜೀವ ಮತ್ತು ಇತರರ ಸುರಕ್ಷತೆಗೆ ಧಕ್ಕೆ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಕೋರ್ಟ್ ಮುಂದೆ ಹಾಜರುಪಡಿಸಿ ಮಹಿಳೆಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಹರ್ ಪೊಲೀಸರು ತಿಳಿಸಿದ್ದಾರೆ. ಮಹಿಳೆಯ ಗುರುತನ್ನು ಪೊಲೀಸರು ಬಿಡುಗಡೆ ಮಾಡಿಲ್ಲ.
ಘಟನೆ ಹಿನ್ನೆಲೆ: ಮಹಿಳೆಯು ತನ್ನ ತಾಯಿಯನ್ನು ಭೇಟಿಯಾಗಲು ಮೇ 29 ರಂದು ಕೊಲ್ಕತ್ತಾಕ್ಕೆ ಹೊರಟಿದ್ದಳು. 5:30ರ ವೇಳೆ ಚೆಕ್ ಇನ್ ಆಗಲು ಚೆಕ್ ಇನ್ ಕೌಂಟರ್ ತಲುಪಿದ ನಂತರ, ಅವರು ವಿಮಾನಯಾನ ಉದ್ಯೋಗಿಯೊಬ್ಬರಿಗೆ ಬೋರ್ಡಿಂಗ್ ಪಾಸ್ ಮತ್ತು ಎರಡು ಬ್ಯಾಗ್ಗಳನ್ನು ನೀಡಿದ್ದಾರೆ.
ಏರ್ಲೈನ್ಸ್ ನಿಯಮಗಳ ಪ್ರಕಾರ, ಪ್ರತಿ ದೇಶೀಯ ಫ್ಲೈಯರ್ಗೆ ಗರಿಷ್ಠ 15 ಕೆಜಿ ತೂಕದ ಒಂದೇ ಚೀಲವನ್ನು ತೆಗೆದುಕೊಂಡು ಹೋಗುವುದಕ್ಕೆ ಮಾತ್ರ ಅವಕಾಶವಿದೆ. ಆದರೆ ಮಹಿಳೆಯ ಬ್ಯಾಗ್ ಒಟ್ಟು 22.05 ಕೆಜಿ ತೂಕವಿದ್ದ ಕಾರಣ, ಹೆಚ್ಚುವರಿ ಲಗೇಜ್ಗೆ ಹಣ ನೀಡುವಂತೆ ಕೇಳಲಾಗಿದೆ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ತಿಳಿಸಿದ್ದಾರೆ.










