ಮಂಡ್ಯ : ಆರೋಗ್ಯ ಸಿಬ್ಬಂದಿಗೆ ಎಲ್ಲಾ ರಜೆ ರದ್ದು ; ಕೆಲಸದ ಸ್ಥಳದಲ್ಲೇ ಊಟ, ತಿಂಡಿ…

136
firstsuddi

ಮಂಡ್ಯ : ಕೊರೊನಾ ಸೋಂಕು ರಾಜ್ಯ ಹಾಗೂ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಿನ್ನಲೆ ಆರೋಗ್ಯ ಇಲಾಖೆ ಸಿಬ್ಬಂದಿಗೆ ಏಪ್ರಿಲ್ 30 ರವರೆಗೆ ಎಲ್ಲಾ ರಜೆಯನ್ನು ರದ್ದುಗೊಳಿಸಲಾಗಿದೆ ಎಂದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಮರನಾಥ್ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಸರ್ಕಾರದ ಆದೇಶದನ್ವಯ ಎಲ್ಲರೂ ಕೆಲಸ ಮಾಡಬೇಕು. ತಪ್ಪಿದಲ್ಲಿ ಸೂಕ್ತ ಕ್ರಮ ಜರುಗಿಸಬೇಕಾಗುತ್ತೆ. ಪ್ರತಿಯೊಬ್ಬ ಸಿಬ್ಬಂದಿ ಸ್ವಯಂಪ್ರೇರಿತವಾಗಿ ಬೆಳಗ್ಗೆ 10 ಗಂಟೆಗೆ ಹಾಜರಾಗಬೇಕು, ಯಾವುದೇ ಕಾರಣಗಳನ್ನು ಹೇಳದೆ ಪ್ರತಿದಿನ ಕೆಲಸಕ್ಕೆ ಬರಬೇಕು. ನಿತ್ಯ ಲಸಿಕೆ ನೀಡುವಿಕೆಯನ್ನು ಸಹ ಹೆಚ್ಚು ಮಾಡಬೇಕು. ಹೀಗಾಗಿ ಏಪ್ರಿಲ್ 30 ರ ವರೆಗೆ ಯಾವುದೇ ರಜೆ ನೀಡುವುದಿಲ್ಲ. ಜೊತೆಗೆ ಊಟದ ವಿರಾಮವನ್ನು ಪಡೆಯುವಂತಿಲ್ಲ. ಕೆಲಸ ಮಾಡುವ ಸ್ಥಳದಲ್ಲೇ ಊಟ, ತಿಂಡಿ ಸೇವಿಸಬೇಕು. ಅತ್ಯಂತ ಅನಿವಾರ್ಯತೆ ಇದ್ದರೆ, ರಜೆ ನೀಡಲಾಗುತ್ತದೆ ಎಂದರು.

ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆ ಮುನ್ನೆಚ್ಚರಿಕೆಯಾಗಿ ಮಂಡಕಹಳ್ಳಿ ಬಳಿ ಕೋವಿಡ್ ಚಿಕಿತ್ಸೆಗಾಗಿ 600 ಬೆಡ್, ಜಿಲ್ಲಾಸ್ಪತ್ರೆ ಬಳಿ 200 ಬೆಡ್ ಸಿದ್ಧಪಡಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ನೆಗೆಟಿವ್ ರಿಪೋರ್ಟ್ ಇರದಿದ್ದರೆ ಬಿಡುವುದಿಲ್ಲ. ಎಲ್ಲ ಭಾಗಗಳಲ್ಲೂ ತಪಾಸಣೆ ಮಾಡುತ್ತಿದ್ದೇವೆ. ಅದೇ ರೀತಿ ಬಾವಲಿ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಮಾಡಲಾಗುತ್ತಿದೆ. ಸರ್ಕಾರದ ಆದೇಶಗಳನ್ನು ಪಾಲಿಸಿ, ಸೋಂಕು ಹರಡುವುದನ್ನು ತಡೆಯಿರಿ ಎಂದು ಡಾ.ಅಮರನಾಥ್ ಅವರು ಮನವಿ ಮಾಡಿದ್ದಾರೆ.