ಮಂಡ್ಯ : ಮಗನ ನಿಧನದ ಸುದ್ದಿ ಕೇಳಿ ತಾಯಿ ಕೂಡ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನಾಗಮಂಗಲ ತಾಲೂಕಿನ ಗಿಡುವಿನ ಹೊಸಹಳ್ಳಿ ಕೊಪ್ಪಲಿನಲ್ಲಿ ನಡೆದಿದೆ.
ಕುಶಾಲ್ (45) ಎಂಬುವರು ನಿನ್ನೆ ತಮ್ಮ ನಿವಾಸದಲ್ಲಿ ಟಿವಿ ನೋಡುತ್ತಿರುವ ವೇಳೆ ಇದ್ದಕ್ಕಿದ್ದಂತೆ ಲೋ ಬಿಪಿಯಾಗಿ ಕೆಳಗೆ ಬಿದ್ದು ಒದ್ದಾಡಿದ್ದಾರೆ. ಇದನ್ನು ಕಂಡ ಅಕ್ಕ-ಪಕ್ಕದ ಮನೆಯವರು ಕುಶಾಲ್ ನನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಆದರೆ ಮನೆಯಿಂದ ಹೊರಗೆ ಬರುತ್ತಿದ್ದಂತೆ ಕುಶಾಲ್ ಕೊನೆಯುಸಿರೆಳೆದಿದ್ದಾರೆ.
ಇತ್ತ ಮನೆಯ ಪಕ್ಕದಲ್ಲೇ ಇದ್ದ ಕುಶಾಲ್ ತಾಯಿ ಲಕ್ಷ್ಮಮ್ಮ (69) ಏನ್ ಆಯ್ತು ಎಂದು ಬಂದು ನೋಡಿದಾಗ ತನ್ನ ಮಗ ಸಾವನ್ನಪ್ಪಿರುವ ದೃಶ್ಯ ಕಂಡು ಹೃದಯಾಘಾತವಾಗಿ ಅವರು ಕೂಡ ಸಾವನ್ನಪ್ಪಿದ್ದಾರೆ. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.










