ಮದರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ ಮಾಡಿ ಸರ್ಕಾರ ಆದೇಶ…

48
firstsuddi

ಲಕ್ನೋ : ಮದರಸಾಗಳಲ್ಲಿ ರಾಷ್ಟ್ರಗೀತೆ `ಜನ ಗಣ ಮನ’ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ನಿನ್ನೆಯಿಂದಲೇ ಉತ್ತರ ಪ್ರದೇಶ ರಾಜ್ಯಾದ್ಯಂತ ಈ ಆದೇಶ ಜಾರಿಗೆ ಬಂದಿದೆ.

ಈ ಕುರಿತು ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿಯ ರಿಜಿಸ್ಟ್ರಾರ್ ಎಸ್.ಎನ್.ಪಾಂಡೆ ಅವರು ಮೇ 9ರಂದು ಎಲ್ಲ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಅಧಿಕಾರಿಗಳಿಗೆ ಆದೇಶ ಹೊರಡಿಸಿದ್ದು, ಮಾ.24ರಂದು ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಪಾಂಡೆ ಆದೇಶದಲ್ಲಿ ತಿಳಿಸಿದ್ದಾರೆ. ಹೊಸ ಶೈಕ್ಷಣಿಕ ಅಧಿವೇಶನದಿಂದ ಎಲ್ಲಾ ಮದರಸಾಗಳಲ್ಲಿ ಪ್ರಾರ್ಥನೆಯ ಸಮಯದಲ್ಲಿ ರಾಷ್ಟ್ರಗೀತೆಯನ್ನು ಕಡ್ಡಾಯಗೊಳಿಸಲಾಗಿದೆ.

ಈ ಆದೇಶದ ಪ್ರಕಾರ, ಶಾಲೆಗಳು ರಾಷ್ಟ್ರಗೀತೆಯಾದ “ಜನ ಗಣ ಮನ” ಜೊತೆಗೆ ಹಿಂದೆ ಹಾಡಿದ ಧಾರ್ಮಿಕ ಪ್ರಾರ್ಥನೆಗಳೊಂದಿಗೆ ಮುಂದುವರಿಯುತ್ತದೆ. ರಂಜಾನ್ ಪ್ರಯುಕ್ತ ಮಾರ್ಚ್ 30ರಿಂದ ಮೇ 11ರವರೆಗೆ ಮದರಸಾಗಳನ್ನು ಮುಚ್ಚಲಾಗಿತ್ತು. ನಿನ್ನೆ (ಗುರುವಾರ) ಮೇ 12 ರಂದು ಶಾಲೆಗಳು ಪುನರಾರಂಭವಾಗಿದ್ದು, ನಿನ್ನೆಯಿಂದಲೇ ಈ ಆದೇಶವನ್ನು ಜಾರಿಗೊಳಿಸಲಾಗಿದೆ. ಈ ಆದೇಶವು ಎಲ್ಲಾ ಮಾನ್ಯತೆ ಪಡೆದ, ಅನುದಾನಿತ ಮತ್ತು ಅನುದಾನ ರಹಿತ ಮದರಸಾಗಳಿಗೆ ಅನ್ವಯಿಸುತ್ತದೆ.

ಇದೀಗ ಉತ್ತರಪ್ರದೇಶ ರಾಜ್ಯದ ಎಲ್ಲ ಮಸೀದಿಗಳಲ್ಲೂ ರಾಷ್ಟ್ರಗೀತೆ ಕಡ್ಡಾಯಗೊಳಿಸಿರುವ ಬೆನ್ನಲ್ಲೇ ಮಹಾರಾಷ್ಟ್ರದ ಮದರಸಾಗಳಲ್ಲೂ ರಾಷ್ಟ್ರಗೀತೆ ಕಡ್ಡಾಯಗೊಳಿಸುವಂತೆ ಬಿಜೆಪಿ ಒತ್ತಾಯಿಸಿದೆ.

ಮದರಸಾ, ಧರ್ಮಾಧಾರಿತ ಭೋದನೆಯಾಗಿರಲಿ ಅಥವಾ ಶಾಲೆಯಾಧಾರಿತ ಕಲಿಕೆಯಾಗಿರಲಿ. ರಾಷ್ಟ್ರದ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಈ ನಿಟ್ಟಿನಲ್ಲಿ ಯೋಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಮಹಾರಾಷ್ಟ್ರ ಸರ್ಕಾರವು ಶೀಘ್ರದಲ್ಲೇ ಇದೇ ಕ್ರಮ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದೆ.