ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಬೆಂಕಿ ಹಚ್ಚಿ, ತಾನೂ ಸಾಯಲು ಯತ್ನಿಸಿದ ಪ್ರೇಮಿ!

71
firstsuddi

ವಿಶಾಖಪಟ್ಟಣಂ : ಪ್ರೀತಿಸಿದ ಹುಡುಗಿ ತನ್ನನ್ನು ಮದುವೆಯಾಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಆಕೆಗೆ ಬೆಂಕಿ ಹಚ್ಚಿ, ಬಳಿಕ ತಾನೂ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿದ ಘಟನೆ ಆಂಧ್ರಪ್ರದೇಶದ ವೈಜಾಗ್ ನ ಖಾಸಗಿ ಲಾಡ್ಜ್  ನಲ್ಲಿ ನಡೆದಿದೆ.

ತೆಲಂಗಾಣದ ಭೂಪಾಲಪಲ್ಲೆ ಮೂಲದ ಪಿ. ಹರ್ಷವರ್ಧನ್ ಹಾಗೂ ವಿಶಾಖಪಟ್ಟಣಂ ಮೂಲದ ಯುವತಿ ಖಾಸಗಿ ವಿಶ್ವವಿದ್ಯಾಲಯದಲ್ಲಿ ಒಟ್ಟಿಗೆ ಓದುತ್ತಿದ್ದರು. ಹರ್ಷವರ್ಧನ್ ಆ ಯುವತಿಯನ್ನು ಪ್ರೀತಿ ಮಾಡುತ್ತಿರುವುದಾಗಿ ಪ್ರಪೋಸಲ್ ಮಾಡಿದ ಮೇಲೆ ಆಕೆ ಆತನನ್ನು ಮದುವೆಯಾಗಲು ನಿರಾಕರಿಸಿದ್ದಳಂತೆ.

ಇದರಿಂದ ಕೋಪಗೊಂಡಿದ್ದ ಹರ್ಷವರ್ಧನ್ ವೈಜಾಗ್ ನ ಲಾಡ್ಜ್ ಗೆ ಆಕೆಯನ್ನು ಕರೆದುಕೊಂಡು ಹೋಗಿ ಆಕೆಯ ಮೇಲೆ ಪೆಟ್ರೋಲ್ ಸುರಿದು, ತಾನೂ ಬೆಂಕಿ ಹಚ್ಚಿಕೊಂಡಿದ್ದಾನೆ. ಬೆಂಕಿ ಜೋರಾಗಿ ಹೊತ್ತಿಕೊಂಡ ಬಳಿಕ ಅವರಿಬ್ಬರೂ ಸಹಾಯಕ್ಕಾಗಿ ಹೊರಗೆ ಓಡಿಬಂದಿದ್ದಾರೆ. ಆಗ ಸಿಬ್ಬಂದಿ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ಧಾರೆ. ಸದ್ಯ ಇಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾನು ಮದುವೆಯಾಗಲು ಒಪ್ಪದ ಕಾರಣ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆದರೆ ಯುವಕ ನಾವಿಬ್ಬರು ಪರಸ್ಪರ ಪ್ರೀತಿಸಿತ್ತಿದ್ದೇವೆ. ಹೀಗಾಗಿ ಒಟ್ಟಿಗೆ ಸಾಯಲು ನಿರ್ಧರಿಸಿದ್ದೆವು ಎಂದು ಹೇಳಿದ್ದಾನೆ. ಇವರಿಬ್ಬರ ಹೇಳಿಕೆ ಒಂದಕ್ಕೊಂದು ಸಂಬಂಧವಿಲ್ಲದ ಕಾರಣ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.