ಬಾಗ್ದಾದ್: ಮದುವೆ ಹಾಲ್‍ನಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಪರಿಣಾಮ ವಧು-ವರ ಸೇರಿ ಒಟ್ಟು 100 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಇರಾಕ್‍ನಲ್ಲಿ ನಡೆದಿದೆ.
ಇರಾಕ್‍ನ ನಿನೆವೆ ಪ್ರಾಂತ್ಯದ ಹಮ್ದನಿಯಾ ಪ್ರದೇಶದಲ್ಲಿ ಬೆಂಕಿ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಪ್ರಧಾನವಾಗಿ ಕ್ರಿಶ್ಚಿಯನ್ ಪ್ರದೇಶವಾಗಿದ್ದು, ಮೊಸುಲ್ ನಗರದ ಹೊರಗೆ ರಾಜಧಾನಿ ಬಾಗ್ದಾದ್‍ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ (205 ಮೈಲುಗಳು) ದೂರದಲ್ಲಿದೆ.
ಘಟನೆ ನಡೆದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕೆಲಸ ಮಾಡುತ್ತಿದ್ದಾರೆ. ಘಟನೆಯಲ್ಲಿ 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಗ್ನಿ ಅನಾಹುತಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಪಟಾಕಿ ಸುಟ್ಟಿದ್ದರಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ.










