ಮಳವಳ್ಳಿ ಬಾಲಕಿ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ಪರಿಹಾರ…

63
firstsuddi

ಮಂಡ್ಯ : ಜಿಲ್ಲೆಯ ಮಳವಳ್ಳಿಯಲ್ಲಿ ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾದ ಬಾಲಕಿ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ 10 ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗಿದೆ. ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಹಾಗೂ ಸಂಸದೆ ಸುಮಲತಾ ಅಂಬರೀಶ್ ಇಂದು ಮೃತ ಬಾಲಕಿ ನಿವಾಸಕ್ಕೆ ಭೇಟಿ ನೀಡಿ ಸರ್ಕಾರದ 10 ಲಕ್ಷ ರೂ. ಚೆಕ್ ಹಸ್ತಾಂತರ ಮಾಡಿ ಸಾಂತ್ವನ ಹೇಳಿದರು.

ಅ.11 ರಂದು ಟ್ಯೂಷನ್ ಗೆ ಹೋಗಿದ್ದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈಯಲಾಗಿತ್ತು. ಈ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕುಂಭಮೇಳ ಸಮಾರೋಪ ಸಮಾರಂಭದಲ್ಲಿ ಮೃತ ಬಾಲಕಿ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದರು.

ಇನ್ನು ಜಿಲ್ಲೆ ಮಳವಳ್ಳಿಯಲ್ಲಿರುವ ಮೃತ ಬಾಲಕಿ ನಿವಾಸಕ್ಕೆ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಮೃತ ಬಾಲಕಿ ಕುಟುಂಬಕ್ಕೆ ಶಾಸಕ ಜಮೀರ್ 5 ಲಕ್ಷ ರೂಪಾಯಿ ಪರಿಹಾರ ನೀಡಿದ್ದಾರೆ.

ಬಳಿಕ ಮಾತನಾಡಿದ ಜಮೀರ್ ಖಾನ್, ಕೃತ್ಯ ಎಸಗಿದ ಪಾಪಿಯನ್ನು ಸಾರ್ವಜನಿಕರ ಮುಂದೆ ತುಂಡು ತುಂಡಾಗಿ ಕತ್ತರಿಸಬೇಕು. ಮನುಷ್ಯರು ಯಾರೂ ಈ ಕೃತ್ಯ ಮಾಡಲ್ಲ. ಅವನು ಮನುಷ್ಯಲ್ಲ ರಾಕ್ಷಸನಿಗಿಂತ ಹೆಚ್ಚು. ಈಗ ಕಠಿಣ ಕಾನೂನು ತರದಿದ್ರೆ ಈ ರೀತಿಯ ಘಟನೆ ನಡೆಯುತ್ತಲೇ ಇರುತ್ತದೆ. ಈ ಪ್ರಕರಣಗಳಿಗೆ ಪ್ರತ್ಯೇಕ ಕಾನೂನು ತರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.