ಮಹಿಳೆಯರಿಗೆ ವಿಶೇಷ ಠೇವಣಿ ಯೋಜನೆ – ಕೇಂದ್ರ ಬಜೆಟ್‍ನ ಹಲವು ಅಂಶಗಳು.. ಇಲ್ಲಿದೆ ವಿವರ

59
firstsuddi

ನವದೆಹಲಿ : ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು 2023-24ನೇ ಸಾಲಿನ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಬಜೆಟ್ ಭಾಷಣದಲ್ಲಿ ನಿರ್ಮಾಲಾ ಸೀತಾರಾಮನ್ ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರವು ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಗೆ ಒತ್ತು ನೀಡಿದ್ದು, ವಿತ್ತೀಯ ಕೊರತೆಯನ್ನು ಕಡಿತಗೊಳಿಸಲು ಗಮನಹರಿಸಿದೆ ಎಂದು ಹೇಳಿದ್ದಾರೆ.

2024ನೇ ಆರ್ಥಿಕ ವರ್ಷದಲ್ಲಿ ಕೃಷಿ ಸಾಲದ ಗುರಿಯನ್ನು 20 ಲಕ್ಷ ಕೋಟಿ ರೂ.ಗೆ ನಿಗದಿಪಡಿಸಲಾಗಿದೆ. ಹೆಚ್ಚಿನ ಮೌಲ್ಯದ ತೋಟಗಾರಿಕಾ ಬೆಳೆಗಳಿಗೆ ರೋಗ-ಮುಕ್ತ ಗುಣಮಟ್ಟದ ನಾಟಿ ಸಾಮಗ್ರಿಗಳ ಲಭ್ಯತೆಯನ್ನು ಸುಧಾರಿಸಲು ಸರ್ಕಾರವು ಆತ್ಮನಿರ್ಭರ್ ಕ್ಲೀನ್ ಪ್ಲಾಂಟ್ ಕಾರ್ಯಕ್ರಮವನ್ನು 2,200 ಕೋಟಿ ರೂ. ವೆಚ್ಚದಲ್ಲಿ ಪ್ರಾರಂಭಿಸಲಿದೆ. ಸಿರಿಧಾನ್ಯ ಕೃಷಿಯನ್ನು ಉತ್ತೇಜಿಸಲು ಭಾರತೀಯ ಸಿರಿಧಾನ್ಯ ಸಂಶೋಧನಾ ಸಂಸ್ಥೆಯನ್ನು ಶ್ರೇಷ್ಠತೆಯ ಕೇಂದ್ರವಾಗಿ ಬೆಂಬಲಿಸಲಿದೆ.

ಮೀನುಗಾರರ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ 6,000 ಕೋಟಿ ರೂ.ಗಳ ಉಪಯೋಜನೆ ಪ್ರಾರಂಭಿಸಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸ್ಟಾರ್ಟ್ಅಪ್ ಗಳನ್ನು ಉತ್ತೇಜಿಸಲು ಕೃಷಿ ವೇಗವರ್ಧಕ ನಿಧಿಯನ್ನು ಸರ್ಕಾರ ಸ್ಥಾಪಿಸಲಿದೆ.

2024ನೇ ಹಣಕಾಸು ವರ್ಷದಲ್ಲಿ ಬಂಡವಾಳ ವೆಚ್ಚವನ್ನು ಶೇ. 33ರಷ್ಟು ಏರಿಕೆ ಮಾಡಲಾಗಿದ್ದು 10 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದು ಜಿಡಿಪಿಯ ಶೇ. 3.3ರಷ್ಟಾಗುತ್ತದೆ. 2024ನೇ ಆರ್ಥಿಕ ವರ್ಷದಲ್ಲಿ ಕೇಂದ್ರದ ಪರಿಣಾಮಕಾರಿ ಬಂಡವಾಳ ವೆಚ್ಚವನ್ನು 13.7 ಲಕ್ಷ ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ.

ಕೇಂದ್ರವು ರಾಜ್ಯ ಸರ್ಕಾರಗಳಿಗೆ 50 ವರ್ಷಗಳ ಬಡ್ಡಿ ರಹಿತ ಸಾಲವನ್ನು ಇನ್ನೂ ಒಂದು ವರ್ಷ ಮುಂದುವರಿಸಲಿದೆ.

ಈ ಬಾರಿಯ ಬಜೆಟ್ ನಲ್ಲಿ ಶಕ್ತಿಯ ಪರಿವರ್ತನೆ ಮತ್ತು ಶೂನ್ಯ ಇಂಗಾಲ ಹೊರಸೂಸುವಿಕೆ ಉದ್ದೇಶಗಳು ಹಾಗೂ ಇಂಧನ ಭದ್ರತೆ ಸಾಧಿಸಲು ಬಂಡವಾಳ ಹೂಡಿಕೆಗಾಗಿ 35,000 ಕೋಟಿ ರೂ.ಗಳನ್ನು ಒದಗಿಸಲಾಗಿದೆ.

ಲಡಾಖ್ ನಿಂದ 13 ಗಿಗಾವ್ಯಾಟ್ ನವೀಕರಿಸಬಹುದಾದ ವಿದ್ಯುತ್ ನ ಸ್ಥಳಾಂತರ ಮತ್ತು ಗ್ರಿಡ್ ಏಕೀಕರಣಕ್ಕಾಗಿ 20,700 ಕೋಟಿ ರೂ. ಯೋಜನೆ ಘೋಷಿಸಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ 8,300 ಕೋಟಿ ರೂ. ನೆರವು ನೀಡಲಿದೆ.

ಎಂಎಸ್ ಎಂಇಗಳಿಗೆ ನವೀಕರಿಸಿದ ಕ್ರೆಡಿಟ್ ಗ್ಯಾರಂಟಿ ಯೋಜನೆಯು ಏಪ್ರಿಲ್ 1, 2023 ರಿಂದ ಜಾರಿಗೆ ಬರಲಿದೆ. 9,000 ಕೋಟಿ ರೂ. ಕಾರ್ಪಸ್ ನಿಧಿಯೊಂದಿಗೆ ಇದು ಆರಂಭವಾಗಲಿದೆ.

ಪ್ರಧಾನ ಮಂತ್ರಿ ಆವಾಸ್ ಯೋಜನೆ ವೆಚ್ಚವನ್ನು ಶೇ. 66ರಷ್ಟು ಹೆಚ್ಚಿಸಲಾಗಿದ್ದು ಬಜೆಟ್ ನಲ್ಲಿ 79,000 ಕೋಟಿ ರೂ. ನೀಡಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ ಒಟ್ಟಾರೆ ವೆಚ್ಚವನ್ನು 2024ರ ಹಣಕಾಸು ವರ್ಷದಲ್ಲಿ ಶೇ. 66ರಷ್ಟು ಹೆಚ್ಚಿಸಲಾಗಿದ್ದು 79,000 ಕೋಟಿ ರೂ.ಗೆ ಏರಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.

ಮಹಿಳೆಯರಿಗೆ ಹಣ ಉಳಿತಾಯಕ್ಕೆ ಹೊಸ ಯೋಜನೆ ಇದಾಗಿದ್ದು, “ಮಹಿಳಾ ಸಮ್ಮಾನ್ ಸೇವಿಂಗ್ಸ್ ಪತ್ರ” ವನ್ನು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಮಹಿಳೆಯರು ಹಾಗೂ ಹೆಣ್ಣು ಮಕ್ಕಳಿಗಾಗಿ ಈ ಯೋಜನೆ ಘೋಷಿಸಲಾಗಿದೆ. ಈ ಉಳಿತಾಯ ಯೋಜನೆಯಡಿ, ಮಹಿಳೆಯರು ಹಾಗೂ ಹೆಣ್ಣುಮಕ್ಕಳ ಹೆಸರಲ್ಲಿ 2 ಲಕ್ಷ ರುಪಾಯಿವರೆಗೂ ಠೇವಣಿ ಇಡಲು ಅವಕಾಶ ಇದ್ದು, ಈ ಉಳಿತಾಯದ ಹಣಕ್ಕೆ ಶೇಕಡಾ 7.5 ನಿಶ್ಚಿತ ಬಡ್ಡಿದರ ಇರಲಿದೆ.

ಹಿರಿಯ ನಾಗರಿಕರು ತಮ್ಮ ಉಳಿತಾಯ ಖಾತೆಗಳಲ್ಲಿ ಈವರೆಗೆ ಗರಿಷ್ಠ 15 ಲಕ್ಷಗಳನ್ನು ಮಾತ್ರ ಇಡಲು ಅವಕಾಶವಿತ್ತು. ಈಗ ಈ ಮಿತಿಯನ್ನು ಹೆಚ್ಚಿಸಲಾಗಿದೆ. ಇನ್ನು ಹಿರಿಯ ನಾಗರಿಕರು ತಮ್ಮ ಖಾತೆಯಲ್ಲಿ 30 ಲಕ್ಷ ರೂ.ಗಳವರೆಗೆ ಠೇವಣಿ ಇಟ್ಟುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇನ್ನು, ಹಿರಿಯ ನಾಗರಿಕರ ಉಳಿತಾಯ ಠೇವಣಿಗಳ ಮೇಲಿನ ಬಡ್ಡಿ ದರವನ್ನು 20 ಮೂಲ ಅಂಕ ಏರಿಸಲು ನಿರ್ಧರಿಸಲಾಗಿದೆ. ಇದರಿಂದ ಹಿರಿಯ ನಾಗರಿಕರ ಉಳಿತಾಯ ಖಾತೆಗಳ ಮೇಲಿನ ವಾರ್ಷಿಕ ಬಡ್ಡಿ ದರ ಶೇ. 7.4ರಿಂದ ಶೇ. 7.6ರವರೆಗೆ ಹೆಚ್ಚಾಗಲಿದೆ.

ಸಾರ್ವಜನಿಕರಿಗೆ ಮತ್ತೊಂದು ಕೊಡುಗೆಯನ್ನು ನೀಡಿರುವ ಕೇಂದ್ರ ಸರ್ಕಾರ, ಮಾಸಿಕ ಆದಾಯ ಮಾದರಿಯ ಠೇವಣಿಗಳ ಗರಿಷ್ಠ ಮಿತಿಯನ್ನು ದುಪ್ಪಟ್ಟುಗೊಳಿಸಲಾಗಿದೆ. ಈವರಗೆ ಇದರ ಮಿತಿ 4.5 ಲಕ್ಷ ರೂ.ಇತ್ತು. ಈಗ ಅದನ್ನು 9 ಲಕ್ಷ ರೂ.ಗಳಿಗೆ ಏರಿಸಲಾಗಿದೆ.

ಪ್ರಮುಖ ಸ್ಥಳಗಳಲ್ಲಿ 157 ಹೊಸ ನರ್ಸಿಂಗ್ ಕಾಲೇಜುಗಳನ್ನು ಸ್ಥಾಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ 2023-24ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.

ಮುಂದಿನ ಮೂರು ವರ್ಷಗಳಲ್ಲಿ ಕೇಂದ್ರವು 3.5 ಲಕ್ಷ ಬುಡಕಟ್ಟು ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿರುವ 748 ಏಕಲವ್ಯ ವಸತಿ ಶಾಲೆಗಳಿಗೆ 38,800 ಶಿಕ್ಷಕರು ಮತ್ತು ಸಹಾಯಕ ಸಿಬ್ಬಂದಿಯನ್ನು ನೇಮಿಸಿಕೊಳ್ಳಲಿದೆ ಎಂದು ಹಣಕಾಸು ಸಚಿವರು ಹೇಳಿದರು.