ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ ಕೆ.ಸಿ ಸದಾನಂದ ನಿಧನ…

91
firstsuddi

ಬೆಂಗಳೂರು : ಹಿರಿಯ ಪತ್ರಕರ್ತ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರ ಮಾಧ್ಯಮ ಸಲಹೆಗಾರ ಕೆ.ಸಿ ಸದಾನಂದ ಅವರು ಹೃದಯಘಾತದಿಂದ ನಿಧನರಾಗಿದ್ದಾರೆ. ತೀವ್ರ ಹೃದಯಾಘಾತಕ್ಕೀಡಾಗಿದ್ದ ಅವರನ್ನು ನಿನ್ನೆ ಮಧ್ಯರಾತ್ರಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅಸುನೀಗಿದ್ದಾರೆ. ಪತ್ನಿ ಹಾಗೂ ಒಬ್ಬ ಪುತ್ರನನ್ನು ಅವರು ಅಗಲಿದ್ದಾರೆ.

ಚನ್ನಪಟ್ಟಣದವರಾದ ಸದಾನಂದ ಅವರು ಸಂಜೆವಾಣಿ, ಕರ್ನಾಟಕ ಮಲ್ಲ ಪತ್ರಿಕೆಗಳಲ್ಲಿ ಸುದೀರ್ಘ ಕಾಲ ಪತ್ರಕರ್ತರಾಗಿ ಕರ್ತವ್ಯ ನಿರ್ವಹಿಸಿದ್ದರು. ನಂತರ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮಾಧ್ಯಮ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದರು.

ಪತ್ರಕರ್ತ ಸದಾನಂದ ಅವರ ನಿಧನಕ್ಕೆ ಸಂತಾಪ ಸೂಚಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ದೀರ್ಘ ಕಾಲದ ನನ್ನ ಒಡನಾಡಿ, ಹಿರಿಯ ಪತ್ರಕರ್ತ, ಮಾಧ್ಯಮ ಕಾರ್ಯದರ್ಶಿಯೂ ಆಗಿದ್ದ ಕೆ.ಸಿ. ಸದಾನಂದ ನಿಧನರಾಗಿದ್ದಾರೆ. ಅವರ ಅಗಲಿಕೆ ನನ್ನನ್ನು ನೋವಿಗೆ ತಳ್ಳಿದೆ. ಎಂಥ ಆಮಿಷಗಳಿಗೂ ಜಗ್ಗದ ಸದಾನಂದ ಕರ್ತವ್ಯನಿಷ್ಠೆ, ಸ್ವಾಮಿನಿಷ್ಠೆಯನ್ನೂ ಪ್ರದರ್ಶಿಸಿದ್ದರು ಎಂದು ಟ್ವೀಟ್ ಮಾಡಿದ್ದಾರೆ.