ಮಾಸ್ಕೋದಿಂದ ಗೋವಾಗೆ ಬರುತ್ತಿದ್ದ ವಿಮಾನಕ್ಕೆ ಬಾಂಬ್ ಬೆದರಿಕೆ – ಉಜ್ಬೇಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ…

60
firstsuddi

ಪಣಜಿ : ರಷ್ಯಾದ ರಾಜಧಾನಿ ಮಾಸ್ಕೋದಿಂದ ಗೋವಾಗೆ ಬರುತ್ತಿದ್ದ ವಿಮಾನವೊಂದಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದ್ದು, ವಿಮಾನವನ್ನು ಉಜ್ಬೇಕಿಸ್ತಾನದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಷ್ಯಾದ ಪೆರ್ಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಗೆ ಹೊರಟಿದ್ದ ಅಝುರ್ ಏರ್ ಚಾರ್ಟರ್ಡ್ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದಿದೆ. ಬಳಿಕ ಅದನ್ನು ಉಜ್ಬೇಕಿಸ್ತಾನದಲ್ಲಿ ಇಳಿಸಲಾಗಿದೆ. ವಿಮಾನದಲ್ಲಿ ಒಟ್ಟು 238 ಪ್ರಯಾಣಿಕರು ಇದ್ದರು ಎಂದು ಮೂಲಗಳು ತಿಳಿಸಿವೆ.

ವರದಿಗಳ ಪ್ರಕಾರ, ‘ದಿ ಅಝುರ್ ಏರ್’ ವಿಮಾನ ನಿಗದಿಯಂತೆ ಮುಂಜಾನೆ 4.15ಕ್ಕೆ ಗೋವಾದ ದಾಬೋಲಿಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಬೇಕಿತ್ತು. ಆದರೆ, ಇದಕ್ಕೂ ಮುನ್ನ 2:30ರ ವೇಳೆಗೆ ದಾಬೋಲಿಮ್ ವಿಮಾನ ನಿಲ್ದಾಣದ ನಿರ್ದೇಶಕರು ಬಾಂಬ್ ಬೆದರಿಕೆಯ ಮೇಲ್ ಅನ್ನು ಸ್ವೀಕರಿಸಿದ್ದು, ಅದನ್ನು ಉಜ್ಬೇಕಿಸ್ತಾನಕ್ಕೆ ತಿರುಗಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಸ್ಕೋದಿಂದ ಗೋವಾಗೆ ಆಗಮಿಸುವ ವಿಮಾನಗಳಿಗೆ ಬಾಂಬ್ ದಾಳಿ ಬೆದರಿಕೆ ಬರುತ್ತಿರುವುದು ಇದು ತಿಂಗಳಲ್ಲಿ ಎರಡನೇ ಪ್ರಕರಣವಾಗಿದೆ.