ನವದೆಹಲಿ : ರಷ್ಯಾದ ಮಾಸ್ಕೋದಿಂದ ದೆಹಲಿಗೆ ಬಂದಿಳಿದ ವಿಮಾನದಲ್ಲಿ ಬಾಂಬ್ ಇರುವುದಾಗಿ ನಿನ್ನೆ ಮಧ್ಯರಾತ್ರಿ ಇಮೇಲ್ ಬಂದಿದ್ದು, ಇದು ಸಾಕಷ್ಟು ಆತಂಕಕ್ಕೆ ಕಾರಣವಾಯಿತು. ಬೆದರಿಕೆ ಮೇಲ್ ಬಂದ ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ವಿಮಾನವನ್ನು ಪರಿಶೀಲಿಸಲಾಗುತ್ತಿದೆ.
ಬೆಳಗ್ಗೆ 3.30ಕ್ಕೆ ಟರ್ಮಿನಲ್ 3ಕ್ಕೆ ಆಗಮಿಸುವ SU232 ವಿಮಾನದಲ್ಲಿ ಬಾಂಬ್ ಇದೆ ಎಂದು ಇಮೇಲ್ ನಲ್ಲಿ ಬೆದರಿಕೆ ಸಂದೇಶ ಬಂದಿದೆ. ಇದರ ನಂತರ ಬಾಂಬ್ ನಿಷ್ಕ್ರಿಯ ದಳ ಮತ್ತು ಇತರ ರಕ್ಷಣಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ವಿಮಾನವನ್ನು ರನ್ ವೇ 29ರಲ್ಲಿ ಇಳಿಸಲಾಯಿತು. 386 ಪ್ರಯಾಣಿಕರು ಮತ್ತು 16 ಸಿಬ್ಬಂದಿಯನ್ನು ವಿಮಾನದಿಂದ ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ಇಡೀ ಪ್ರಕರಣದ ತನಿಖೆ ನಡೆಯುತ್ತಿದೆ.
ಅಧಿಕಾರಿಗಳ ಪ್ರಕಾರ, ವಿಮಾನವನ್ನು ಕೂಲಂಕುಷವಾಗಿ ಪರಿಶೀಲಿಸಲಾಗಿದೆ ಮತ್ತು ಇದುವರೆಗೂ ಯಾವುದೇ ಅನುಮಾನಾಸ್ಪದ ವಸ್ತು ಕಂಡುಬಂದಿಲ್ಲ ಎಂದು ಹೇಳಿದರು.










