ಬೆಂಗಳೂರು : ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿದ್ದರೆ ಕಠಿಣ ಕ್ರಮ ಅನಿವಾರ್ಯ ಎಂದು ಸಚಿವ ಡಾ. ಕೆ. ಸುಧಾಕರ್ ಅವರು ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಾಗರಿಕರಿಗೆ ಸ್ಪಷ್ಟವಾದ ಸಂದೇಶವನ್ನು ಕೊಟ್ಟಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಾಗುತ್ತಿದ್ದು, ಇತ್ತ ಮಹಾರಾಷ್ಟ್ರ, ಕೇರಳದಲ್ಲಿ ಕೂಡ ಏರಿಕೆಯಾಗುತ್ತಿದೆ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಇಲ್ಲದಿದ್ದರೆ ಕಠಿಣ ಕ್ರಮಕ್ಕೆ ಮುಂದಾಗಬೇಕಾಗುತ್ತೆ ಅಂತ ಸಿಎಂ ಹೇಳಿದ್ದಾರೆ ಎಂದು ಸಚಿವರು ತಿಳಿಸಿದರು.
ಇಂದಿನಿಂದ ದೊಡ್ಡ ದೊಡ್ಡ ಜಾಹೀರಾತು ಕೊಟ್ಟು ಜಾಗೃತಿ ಮೂಡಿಸುತ್ತೇವೆ. ಇದುವರೆಗೂ 15 ಲಕ್ಷ ಜನರಿಗೆ ಲಸಿಕೆ ನೀಡಿದ್ದೇವೆ. ಇನ್ನಷ್ಟು ಲಸಿಕೆ ವಿತರಣೆಯನ್ನು ಹೆಚ್ಚಿಸಲಾಗುವುದು. ಪ್ರತಿ ದಿನ ಪ್ರಾಥಮಿಕ ಸರ್ಕಾರಿ ಆಸ್ಪತ್ರೆಗಳಲ್ಲಿ 100 ಜನರಿಗೆ ಟೆಸ್ಟ್ ಮಾಡಲೇ ಬೇಕು. ಜನರಲ್ ಆಸ್ಪತ್ರೆಗಳಲ್ಲಿ 500 ಜನರಿಗೆ ಲಸಿಕೆ ಟಾರ್ಗೆಟ್ ನೀಡಿದ್ದೇವೆ. ಪ್ರತಿ ಸೋಂಕಿತ ವ್ಯಕ್ತಿಗೆ 20 ಪ್ರೈಮರಿ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಮಾಡಲೇ ಬೇಕು ಎಂದು ಸೂಚಿಸಲಾಗಿದೆ ಎಂದು ಸಚಿವರು ಹೇಳಿದರು.
ಇನ್ನು ಗಡಿ ರಾಜ್ಯಗಳಲ್ಲಿ ಸೋಂಕು ಏರಿಕೆ ಆಗಿರೋದೇ ಜಿಲ್ಲೆಗಳಲ್ಲಿ ಕೊರೊನಾ ಏರಿಕೆಗೆ ಪ್ರಮುಖ ಕಾರಣವಾಗಿದೆ. ಸಭೆ ಸಮಾರಂಭಗಳಿಗೆ ಕಠಿಣ ನಿಯಮ ಜಾರಿ ಆಗುತ್ತೆ ಎಂದರು. ಪ್ರತಿಭಟನೆ, ಸಿನಿಮಾ ಹಾಲ್ ಗಳಿಗೆ ಟಫ್ ರೂಲ್ಸ್ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಅವರು ನಾಳೆ ಪಿಎಂ ಅವರು ರಾಜ್ಯಗಳ ಸಿಎಂಗಳ ಜೊತೆ ವೀಡಿಯೋ ಕಾನ್ಫರೆನ್ಸ್ ನಡೆಸುತ್ತಾರೆ. ಪ್ರತಿಭಟನೆ, ಬಹಿರಂಗ ಸಭೆ-ಸಮಾರಂಭಗಳಿಗೆ ರೂಲ್ಸ್ ವಿಚಾರ ಕೂಡ ಆ ಬಳಿಕ ನಿರ್ಧಾರ ಆಗುತ್ತದೆ ಎಂದು ಸಚಿವ ಸುಧಾಕರ್ ಅವರು ವಿವರಿಸಿದ್ದಾರೆ.










