ಮೂಡಿಗೆರೆ:ಮಳೆಯಲ್ಲಿ ನೆನೆದ ಮಲೆನಾಡಿಗ್ರು ಬೆಂಕಿ ಮೇಲೆ ಮಲಗುತ್ತಿದ್ದಾರೆ….!

617

ಮೂಡಿಗೆರೆ:ಅವ್ರಿಗೆ ಬೆಂಕಿಯೇ ಜೀವಾಳ. ಬೆಂಕಿ ಇಲ್ದೆ ಅವರಿಗೆ ಬದುಕೇ ಇಲ್ಲ. ಮಳೆಗಾಲದಲ್ಲಿ ಮಲೆನಾಡಿಗ್ರು ಆಹಾರ ಧಾನ್ಯ ಸಂಗ್ರಹಿಸಿಟ್ರೆ, ಆ ಗ್ರಾಮದ ಜನ ಮಾತ್ರ ಸೌಧೆಯನ್ನ ಶೇಖರಿಸಿಡ್ತಾರೆ. ನಿನ್ನೆ-ಮೊನ್ನೆಯಿಂದಲ್ಲ. ಹತ್ತಾರು ವರ್ಷಗಳಿಂದ. ಸುತ್ತಲೂ ಮಳೆ. ಮನೆಯೊಳಗೆ ಬಿಸಿಯ ಧಗೆ-ಹೊಗೆ. ಸರ್ಕಾರಕ್ಕೆ ಈ ಗ್ರಾಮವಂದ್ರೆ ಹಗೆ. ಹೇಮಾವತಿಗೆ ಆಟ, ಜನರಿಗೆ ಪ್ರಾಣಸಂಕಟ. ಇವ್ರ ಆತಂಕದ ಬದುಕಿಗೂ ಇದೆ ದಶಕಗಳ ಇತಿಹಾಸ. ಸರ್ಕಾರಕ್ಕೆ ಎರಡ್ಮೂರು ದಶಕಗಳಿಂದ ಮನವಿ ಮಾಡ್ತಿದ್ರು, ಇವ್ರ ನೋವಿನ ಕೂಗು ಸರ್ಕಾರಕ್ಕೆ ಕೇಳಲೇ ಇಲ್ಲ. ಅನಿವಾರ್ಯ ದಶಕಗಳಿಂದಲೂ ಆತಂಕದ ಬದುಕನ್ನೇ ಬದುಕ್ತಿದ್ದಾರೆ.


ಬಿರುಕು ಬಿಟ್ಟ ಗೋಡೆಗಳು. ಶೀಥದಿಂದ ಈಗ್ಲೋ-ಆಗ್ಲೋ ಅಂತಿರೋ ಮನೆಗಳು. ಆಯಸ್ಸೇ ಇಲ್ಲದ ಗುಡಿಸಲು. ಮೇಲಿಂದ ಮಳೆಯಬ್ಬರ. ಮಳೆ ದೇವನ ಕಣ್ಣು ಉರಿಯುವಂತೆ ಮನೆಯೊಳಗಿಂದ ಹೊಗೆಯಬ್ಬರ. ಹೌದು, ಮನೆಯೊಳಗೆ ಹೀಗೆ ಕೆಂಡ ಹರಡದಿದ್ರೆ ಇವ್ರಿಗೆ ಬದುಕೇ ಇಲ್ಲ. ಇಂತಹಾ ಬದುಕು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಉಗ್ಗೇಹಳ್ಳಿ ದಲಿತ ಕುಟುಂಬಗಳಿಗೆ ಅನಿವಾರ್ಯ. ಯಾಕಂದ್ರೆ, ಹೇಮಾವತಿ ನದಿ ತಟದಲ್ಲಿರೋ ಈ ಗ್ರಾಮದಲ್ಲಿ 150ಕ್ಕೂ ಹೆಚ್ಚು ದಲಿತ ಕುಟುಂಬಗಳಿವೆ. ಪ್ರತಿ ಮಳೆಗಾಲದಲ್ಲೂ ಹೇಮಾವತಿ  ಹರಿಯೋದು ಈ ಗ್ರಾಮದೊಳಗೆ. ಮನೆಯ ಗೋಡೆ ಹಾಗೂ ನೆಲದ ಶೀಥವನ್ನ ಇವ್ರು ಅರಗಿಸಿಕೊಳ್ಳೋದಕ್ಕೆ ಅಸಾಧ್ಯ. ಅದಕ್ಕಾಗಿ ಮಳೆಗಾಲದಲ್ಲಿ ಮನೆ ತುಂಬಾ ಹೀಗೆ ಬೆಂಕಿಯನ್ನ ಹರಡುತ್ತಾರೆ. ಭೂಮಿಯ ಉಷ್ಣ ಹೆಚ್ಚಾದ ಮೇಲೆ ಮಲಗುತ್ತಾರೆ. ಇವ್ರು ಕಳೆದ ಐವತ್ತು ವರ್ಷಗಳಿಂದ ಮಳೆ ಯತೇಚ್ಛವಾಗಿ ಸುರಿಯೋ ವರ್ಷಗಳಲೆಲ್ಲಾ ಹೀಗೇ ಬದುಕ್ತಿರೋದು. ಗ್ರಾಮವನ್ನ ಸ್ಥಳಾಂತರಿಸಿ ಎಂದು ಮಾಡಿದ ಮನವಿ ಪತ್ರಗಳ ಕಥೆಯೂ ಹೊಗೆಯೇ ಆಗಿದೆ. ಈ ಬಗ್ಗೆ ಫಸ್ಟ್ ಸುದ್ದಿಯೊಂದಿಗೆ ಮಾತನಾಡಿದ ಗ್ರಾಮದ ಗೀತಾ ಎಂಬುವರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ ಮಳೆ ಹೆಚ್ಚಾಗಿ ಸುರಿದ್ರೆ ಈ ಗ್ರಾಮವೇ ಜಲಾವೃತಗೊಳ್ಳುತ್ತೆ. ನೀರು ಮನೆಯೊಳಗೂ ಬರುತ್ತೆ, ಮನೆಯೊಳಗಿಂದ್ಲೂ ಉಕ್ಕುತ್ತೆ. ಪ್ರತಿ ಮಳೆಗಾಲದಲ್ಲೂ ಇವ್ರು ಭಯದಿಂದ ರಾತ್ರಿ ಕಳೆಯುತ್ತಾರೆ. ನೆಮ್ಮದಿಯ ನಿದ್ದೆಯೂ ಇಲ್ಲದಂತೆ. ಮಳೆಗಾಲದಲ್ಲಿ ಗ್ರಾಮಕ್ಕೆ ಹತ್ತಾರು ತೊಂದರೆ ಜೊತೆ ಅನಾರೋಗ್ಯ ಉಚಿತ. ಮಳೆಗಾಲ ಬಂತಂದ್ರೆ ಇಲ್ಲಿನೋರಿಗೆ ಶೀಥ, ಜ್ವರ ಸೇರಿದಂತೆ ಹಲವು ಸಮಸ್ಯೆ. ಆಸ್ಪತ್ರೆ ಎಡತಾಕೋದು ಮಾಮೂಲಿಯಾಗುತ್ತೆ. ಹೀಗೆ ಕಳೆದ ನಾಲ್ಕೈದು ದಶಕಗಳಿಂದ ಹೀಗೆ ಜೀವವನ್ನ ಕೈನಲ್ಲಿಟ್ಕೊಂಡು ಬದುಕ್ತಿರೋ ಇವ್ರು ನಮ್ಮನ್ನ ಸ್ಥಳಾಂತರ ಮಾಡಿ ಎಂದು ಮನವಿ ಮಾಡ್ಕೊಂಡ್ರು ಇವ್ರ ನೋವಿನ ಕೂಗೂ ಸರ್ಕಾರಕ್ಕೆ ಕೇಳಿಲ್ಲ. ಮಳೆಗಾಲ ಬಂತೆಂದ್ರೆ ಇವ್ರು ಮಳೆ ಹಾಗೂ ಹೇಮಾವತಿ ನದಿಯನ್ನ ಎದುರಿಸಲು ಸರ್ವ ರೀತಿಯಲ್ಲೂ ಸನ್ನದ್ಧರಾಗಿರ್ತಾರೆ. ಮಳೆ ಹೆಚ್ಚಾದ ವರ್ಷದಲ್ಲೆಲ್ಲಾ ಇವ್ರಿಗೆ ಈ ರೀತಿಯ ಬದುಕು ಕಾಮನ್. ನಮ್ಮನ್ನ ಸ್ಥಳಾಂತರ ಮಾಡಿ ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿಕೊಂಡಿದ್ದೇವೆ, ಆದ್ರೆ, ಯಾವ ಅಧಿಕಾರಿಗಳೂ ನಮ್ಮ ನೋವಿಗೆ ಸ್ಪಂದಿಸಿಲ್ಲ ಅಂತಾರೆ ಗ್ರಾಮಸ್ಥೆ ಆಶಾ….ಬೆಂಕಿ ಜೀವನದ ಒಂದು ಭಾಗ. ಆದ್ರೆ, ಇವ್ರಿಗೆ ಮಾತ್ರ ಮಳೆ ಹೆಚ್ಚಾದ ವರ್ಷವೆಲ್ಲಾ ಅದೇ ಒಂದು ಭಾಗ. ಇವ್ರನ್ನ ಅಗ್ನಿ ಪುತ್ರರು ಅಂದ್ರು ತಪ್ಪಿಲ್ಲ. ಮಳೆಗಾಲದಲ್ಲಿ ಮಲೆನಾಡಲ್ಲಿ ಇಂತಹಾ ಜೀವನ ಮಾಮೂಲಿ. ಆದ್ರೆ, ಸರ್ಕಾರಗಳೂ ಇವ್ರನ್ನ ಸ್ಥಳಾಂತರ ಮಾಡದಿರೋದೆ ದುರ್ದೈವ. ಇವ್ರ ನೋವಿಗೆ ಧನಿಯಾಗಬೇಕಿದ್ದ ರಾಜಕೀಯ ದಣಿಗಳು ಓಟ್ ಕೇಳೋಕಷ್ಟೆ ಭೇಟಿ ನೀಡೋದು. ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತವೂ ನೋವಿಗೆ ಸ್ಪಂದಿಸಿಲ್ಲ. ಇಷ್ಟ ದಿನದ್ದು ಹಾಳಾಗ್ ಹೋಗ್ಲಿ, ಇನ್ನಾದ್ರು ಇವ್ರನ್ನ ಸ್ಥಳಾಂತರ ಮಾಡ್ಲಿ ಅನ್ನೋದು ಮೂಡಿಗೆರೆ ಜನರ ಆಶಯ…