ಮೂಡಿಗೆರೆ : ಅರಣ್ಯೀಕರಣ ಮಾಡುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯ : ಎಂ.ಇ. ಚರಣ್ ಕುಮಾರ್.

139
firstsuddi

ಕೊಟ್ಟಿಗೆಹಾರ : ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅರಣ್ಯ ಸಸ್ಯಕ್ಷೇತ್ರದಲ್ಲಿ ಬೆಲೆಬಾಳುವ ಮಹಾಗನಿ, ನೆರಳೆ, ಅತ್ತಿ, ನುಗ್ಗೆ, ಸಿಲ್ವರ್ ಮುಂತಾದ ಗಿಡಗಳನ್ನು ಬೆಳೆಯಲಾಗಿದ್ದು ಅವುಗಳನ್ನು ಬಡತನ ರೇಖೆಗಿಂತ ಕಡಿಮೆಯಿರುವ ರೈತರಿಗೆ ಉಚಿತವಾಗಿ ನೀಡಲಾಗುತ್ತಿದೆ. ಇದರ ಸದುಪಯೋಗವನ್ನು ಬಡ ರೈತರು ಪಡೆದು ಅವುಗಳನ್ನು ನೆಡುವುದರ ಮೂಲಕ ಪರಿಸರ ಉಳಿಸುವ ಕಾರ್ಯ ಮಾಡಬೇಕು ಎಂದು ಚಿಕ್ಕಮಗಳೂರು ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಎಂ.ಇ. ಚರಣ್ ಕುಮಾರ್ ಹೇಳಿದರು.

ಅವರು ಸಬ್ಬೇನಹಳ್ಳಿಯ ಅರಣ್ಯ ಸಸ್ಯ ಕ್ಷೇತ್ರದಲ್ಲಿ ಬಡ ರೈತರಿಗೆ ಕೃಷಿ ಅರಣ್ಯ ಕಾರ್ಯಕ್ರಮದಲ್ಲಿ ಉಚಿತವಾಗಿ ಗಿಡಗಳನ್ನು ವಿತರಿಸಿ ಮಾತನಾಡಿದರು. ಪ್ರತಿವರ್ಷವೂ ಸಾಮಾಜಿಕ ಅರಣ್ಯದ ಸಸ್ಯ ಕ್ಷೇತ್ರದಲ್ಲಿ ವಿವಿಧ ಪರಿಸರ ಸಂರಕ್ಷಣೆಯ ಗಿಡಗಳನ್ನು ನೀಡಲಾಗುತ್ತಿದೆ. ಈ ಬಾರಿ ಒಂದು ಲಕ್ಷದ ಮೂವತ್ತೈದು ಸಾವಿರ ಗಿಡ ನೀಡುವ ಯೋಜನೆಯಿದೆ. ಬೆಲೆಬಾಳುವ ಗಿಡಗಳನ್ನು ಪಡೆದರೆ ಸಾಲದು. ಅವುಗಳ ಸದುಪಯೋಗವಾಗಬೇಕು. ಅರಣ್ಯೀಕರಣ ಮಾಡುವುದರಿಂದ ಪರಿಸರ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ ಎಂದರು.

ಮೂಡಿಗೆರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಡಿ.ಡಿ ಪ್ರಕಾಶ್ ಮಾತನಾಡಿ, ಮನುಷ್ಯ ನೆಮ್ಮದಿಯಾಗಿ ಬದುಕಲು ಪ್ರಕೃತಿ ಅನೇಕ ಕೊಡುಗೆಗಳನ್ನು ಕೊಟ್ಟಿದೆ. ಆದರೆ ನಾವು ಆ ಕೊಡುಗೆಗಳನ್ನು ನಾಶಪಡಿಸಿ ಪರಿಸರ ಮಾಲಿನ್ಯ ಮಾಡುತ್ತಿದ್ದೇವೆ. ಸ್ವಚ್ಚವಾದ ಪರಿಸರವಿದ್ದರೆ ನಾವು ಆರೋಗ್ಯವಂತ ಜೀವನ ನಡೆಸಬಹುದು. ನಮ್ಮ ಶಾಲೆ ಮತ್ತು ಮನೆಯ ಸುತ್ತಮುತ್ತ ಗಿಡಗಳನ್ನು ಬೆಳೆಸಿ ಪರಿಸರ ಸ್ನೇಹಿಯಾಗಿ ಬಾಳಿದರೆ ದೇಶಕ್ಕೆ ಉತ್ತಮ ಕೊಡುಗೆ ಕೊಟ್ಟಂತೆ ಆಗುತ್ತದೆ ಎಂದರು.

ಸಿ ವಿತರಣಾ ಕಾರ್ಯಕ್ರಮದಲ್ಲಿ ಮೂಡಿಗೆರೆ ಸಾಮಾಜಿಕ ಅರಣ್ಯ ಉಪವಲಯ ಅಧಿಕಾರಿ ಕೆ.ಆನಂದ್, ಫಲ್ಗುಣಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎ.ಕವೀಶ್, ಪಿಡಿಒ ಯತೀಶ್ ಕುಮಾರ್, ಗ್ರಾ.ಪಂ.ಸದಸ್ಯೆ ಶೀಲಾ, ಅರಣ್ಯ ರಕ್ಷಕ ಮಂಜುನಾಥ್,ಅರಣ್ಯ ಪ್ರೇರಕರಾದ ಶಂಕರ್.ಮಂಜುನಾಥ್ ಇದ್ದರು.