ಮೂಡಿಗೆರೆ : ತಮ್ಮ ಗ್ರಾಮದ ರಸ್ತೆಯನ್ನು ಸರಿಪಡಿಸಿ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ ಹೊಸಗದ್ದೆ, ನರನಹಡ್ಲು ಗ್ರಾಮಸ್ಥರು…

270
firstsuddi

ಮೂಡಿಗೆರೆ : ತಮ್ಮ ಊರಿನ ರಸ್ತೆಯನ್ನು ಸರಿಪಡಿಸಿಕೊಡಿ ಎಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಎಷ್ಟು ಕೇಳಿಕೊಂಡರೂ ರಸ್ತೆ ದುರಸ್ಥಿ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದಿರುವುದನ್ನು ಕಂಡ ಹೊಸಗದ್ದೆ, ನರನಹಡ್ಲು ಹಾಗೂ ಹೊರಟಿಮನೆ ಗ್ರಾಮಸ್ಥರು ತಾವೇ ಹಣ ಹೊಂದಿಸಿ ತಮ್ಮ ಗ್ರಾಮದ ರಸ್ತೆಯನ್ನು ಸರಿಪಡಿಸಿಕೊಂಡ ಘಟನೆ ಕಳಸ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ನಡೆದಿದೆ.
ಪ್ರತೀಬಾರಿ ರಸ್ತೆ ವಿಚಾರ ಪ್ರಸ್ತಾಪ ಮಾಡಿದರೂ ನೀವು ಇರುವ ಪ್ರದೇಶ ಜನರಲ್ ಕೆಟಗರಿ ವ್ಯಾಪ್ತಿಗೆ ಬರುತ್ತದೆ. ಆದುದರಿಂದ ಸರ್ಕಾರದ ಅನುದಾನ ಸಿಗುವುದಿಲ್ಲ. ಬೇರೆ ಯಾವುದೇ ಅನುದಾನದಿಂದ ಹಣ ಹೊಂದಿಸಲು ಸಾಧ್ಯವಿಲ್ಲ ಎನ್ನುವ ಜನಪ್ರತಿನಿಧಿಗಳ ಮಾತಿಗೆ ಬೇಸತ್ತ ಹೊಸಗದ್ದೆ, ನರನಹಡ್ಲು ಹಾಗೂ ಹೊರಟಿಮನೆ ಗ್ರಾಮಸ್ಥರು ತಾವೇ ಹಣ ಹೊಂದಿಸಿ ತಮ್ಮ ಗ್ರಾಮದ ರಸ್ತೆಯನ್ನು ಸರಿಪಡಿಸಿಕೊಂಡು ಬಿಸಿ ಮುಟ್ಟಿಸಿದ್ದಾರೆ.
ಕಳಸ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸಗದ್ದೆ, ನರನಹಡ್ಲು ಹಾಗೂ ಹೊರಟಿಮನೆ ಗ್ರಾಮಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಮನೆಗಳಿವೆ. ಎಲ್ಲವೂ ಜನರಲ್ ಕೆಟಗರಿಯಲ್ಲಿ ಬರುವುದರಿಂದ ಸರ್ಕಾರದ ವಿಶೇಷ ಅನುದಾನ ಪಡೆಯುವಲ್ಲಿ ಇಲ್ಲಿನ ಗ್ರಾಮಸ್ಥರು ವಿಫಲರಾಗಿದ್ದರು. ಇಲ್ಲಿನ ಮನೆಗಳಿಗೆ ತೆರಳಲು ಉತ್ತಮ ರಸ್ತೆ ಸಂಪರ್ಕವೇ ಇರಲಿಲ್ಲ. ಅದರಲ್ಲೂ ಈ ಬಾರಿಯ ಅತೀವೃಷ್ಟಿಯಿಂದಾಗಿ ಇದ್ದ ಕಚ್ಛಾರಸ್ತೆಯೂ ಕೊಚ್ಚಿಕೊಂಡು ಹೋಗಿತ್ತು. ಈ ವಿಚಾರವಾಗಿ ಸಂಸದರು, ಶಾಸಕರ ಆದಿಯಾಗಿ ಎಲ್ಲಾ ಜನಪ್ರತಿನಿಧಿಗಳ ಬಳಿ ಗ್ರಾಮಸ್ಥರು ಪರಿಪರಿಯಾಗಿ ಬೇಡಿಕೊಂಡರೂ ಯಾರೊಬ್ಬರೂ ಪರಿಸ್ಥಿತಿಯ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಇದರಿಂದ ನೊಂದ ಗ್ರಾಮಸ್ಥರು ತಾವೇ ಹಣ ಹೊಂದಿಸಿ ರಸ್ತೆ ದುರಸ್ತಿ ಮಾಡಿ ಜನಪ್ರತಿನಿಧಿಗಳಿಗೆ ಬಿಸಿ ಮುಟ್ಟಿಸಿದ್ದಾರೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು ಗ್ರಾಮಸ್ಥರ ಈ ನಡೆಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ.