ಮೂಡಿಗೆರೆ ತಾಲೂಕಿನ ಹೊಳೆಕುಡಿಗೆ ಗ್ರಾಮಕ್ಕೆ ಆಡಳಿತ ವ್ಯವಸ್ಥೆ ಸತ್ತು ದಶಕಗಳೇ ಕಳೆದಿದೆ…?

1254

ಮೂಡಿಗೆರೆ : ದೇಶಕ್ಕೆ ಆಡಳಿತ ವ್ಯವಸ್ಥೆ ಇದೆ. ಜಿಲ್ಲಾಡಳಿತ, ತಾಲೂಕು ಆಡಳಿತ, ರಾಜಕಾರಣಿಗಳು ಎಲ್ಲರೂ ಇದ್ದಾರೆ. ಆದರೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮಾಗುಂಡಿ ಸಮೀಪದ ಹೊಳೆಕುಡಿಗೆ ಗ್ರಾಮಕ್ಕೆ ಮಾತ್ರ ದೇಶದ ಆಡಳಿತ ವ್ಯವಸ್ಥೆ ಸತ್ತು ದಶಕಗಳೇ ಕಳೆದಿದೆ. ಯಾಕೆಂದರೆ, ಈ ಗ್ರಾಮಕ್ಕೆ ಓಡಾಡೋಕೆ ರಸ್ತೆಯೇ ಇಲ್ಲ. ರಸ್ತೆ ಈ ದೇಶದ ಎಷ್ಟೋ ಗ್ರಾಮಕ್ಕೆ ಇಲ್ಲ, ಇದೇನು ಮಹಾ ಅನ್ನಬೇಡಿ. ರಸ್ತೆ ಇಲ್ಲ ಅಂದ್ರೆ ಕಲ್ಲು-ಮಣ್ಣಿನ ರಸ್ತೆಯೂ ಇಲ್ಲ. ಇವ್ರಿಗೆ ಭದ್ರ ನದಿಯೇ ರಸ್ತೆ. ನದಿಯಲ್ಲಿ ಎಷ್ಟೇ ವೇಗವಾಗಿ ನೀರು ಹರಿಯುತ್ತಿದ್ರು, ಈ ಗ್ರಾಮದ ಜನ ತೆಪ್ಪದ ಮೂಲಕವೇ ಓಡಾಡಬೇಕು. ಇದು ಇಂದು-ನಿನ್ನೆಯದ್ದಲ್ಲ. ಕಳೆದ ಎರಡ್ಮೂರು ದಶಕದ್ದು. ಹತ್ತಾರು ಡಿಸಿ, ತಹಶೀಲ್ದಾರ್, ರಾಜಕಾರಣಿಗಳು ಬಂದ್ರು ಈ ಗ್ರಾಮಕ್ಕೆ ದಾರಿ ಮಾಡಿಕೊಡುವಲ್ಲಿ ಸೋತಿದ್ದಾರೆ. ಆದಿವಾಸಿ ಸಮುದಾಯದ ಇಲ್ಲಿನ ಜನ ಪ್ರಜಾಪ್ರಭುತ್ವದಲ್ಲಿ ಅನಾಥರಾಗಿ ಬದುಕುತ್ತಿದ್ದಾರೆ. ಅಂತಹಾ ಗ್ರಾಮದಲ್ಲಿ ಇಂದು ಅಮಾನವೀಯ ಘಟನೆಯೊಂದು ನಡೆದು ಹೋಗಿದೆ. ಇನ್ನಾದರು ಸತ್ತಿರೋ ಸರ್ಕಾರಕ್ಕೆ ಜೀವ ಬರಲಿದೆಯಾ ಅಂತ ಕಾದುನೋಡಬೇಕು.

ಏನದು ಅಮಾನವೀಯ ಘಟನೆ : ಕಳೆದ ಕೆಲ ದಿನಗಳ ಹಿಂದೆ ಈ ಗ್ರಾಮದ ಲಕ್ಷ್ಮಮ್ಮ ಎಂಬುವರು ಅನಾರೋಗ್ಯದಿಂದ ಬಳಲುತ್ತಿದ್ರು. ಇವರನ್ನ ಮಂಗಳೂರಿನ ಆಸ್ಪತ್ರೆಗೆ ಸೇರಿಸಿದ್ದರು ಚಿಕಿತ್ಸೆ ಫಲಕಾರಿಯಾಗಿದೆ ಸಾವನ್ನಪ್ಪಿದ್ದರು. ಇಂದು ಆ ಮೃತದೇಹವನ್ನ ತೆಪ್ಪದ ಮೂಲಕವೇ ಗ್ರಾಮಕ್ಕೆ ತಂದಿದ್ದಾರೆ ಅಂದ್ರೆ, ಆಡಳಿತ ವ್ಯವಸ್ಥೆ ಬೇಕೆ ಎಂದು ಅನ್ನಿಸೋದ್ರಲ್ಲಿ ತಪ್ಪಿಲ್ಲ. ತುಂಬಿ ಹರಿಯುತ್ತಿರೋ ಭದ್ರಾ ನದಿಯಲ್ಲಿ ಲಕ್ಷ್ಮಮ್ಮನ ಸಂಬಂಧಿಗಳು ಜೀವ ಭಯ ಬಿಟ್ಟು ತೆಪ್ಪದಲ್ಲಿ ಮೃತದೇಹ ಇಟ್ಟುಕೊಂಡು, ಕಣ್ಣೀರಾಕುತ್ತ ದೋಣಿ ದೂಡಿಕೊಂಡು, ನದಿಯಲ್ಲೇ ಮೃತದೇಹವನ್ನ ಸಾಗಿದ್ದಾರೆ. ಇಂತಹಾ ಆಧುನಿಕ ಯುಗದಲ್ಲಿ ಎಲ್ಲಾ ಸೌಲಭ್ಯ-ಸವಲತ್ತುಗಳಿರೋ ಜಗದಲ್ಲಿ ಈ ಘಟನೆ ಮನುಕುಲ, ಸರ್ಕಾರ, ರಾಜಕಾರಣಿಗಳು ತಲೆತಗ್ಗಿಸಬೇಕಾದ ಘಟನೆ. ಆದ್ರೆ, ಇಲ್ಲಿನ ರಾಜಕಾರಣಿಗಳು, ಆಡಳಿತಾಧಿಕಾರಿಗಳು, ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಇಂದಿಗೂ ಈ ಗ್ರಾಮಕ್ಕೆ ಭೇಟಿ ನೀಡಿಲ್ಲ ಅಂದ್ರೆ ಏನನ್ನಬೇಕೋ ಗೊತ್ತಿಲ್ಲ. ಹಾಗಂತ ಇವರು, ಸರ್ಕಾರದ ಗಮನಕ್ಕೆ ತಂದಿಲ್ಲ ಅಂತಲ್ಲ. ಸಾಕಷ್ಟು ಬಾರಿ ಕಂಡಕಂಡವರಿಗೆಲ್ಲಾ ಕೈಮುಗಿದು, ಕಾಲಿಡಿದು ಬೇಡಿಕೊಂಡಿದ್ದಾರೆ. ಆದ್ರೆ, ಈ ಆದಿವಾಸಿಗಳ ನೋವು, ಕೂಗು ಯಾರ ಕಿವಿಗೂ ಬಿದ್ದಿಲ್ಲ ಅನ್ನೋದು ಮಾತ್ರ ದುರಂತ. ಬಂದಂತಹಾ ರಾಜಕಾರಣಿಗಳು, ಅಧಿಕಾರಿಗಳು ಬಡವರ ಮನೆಯ ಊಟ ಚೆನ್ನ ಎಂದು ಹಾಲು, ಜ್ಯೂಸ್ ಕುಡಿದು ಬಂದ ದಾರಿಗೆ ಸುಂಕ ಇಲ್ಲ ಎಂಬಂತೆ ಹೋದವರೆ.

ಈ ಗ್ರಾಮಕ್ಕೆ ದಾರಿ ಇದೆ. ಆದರೆ, ಪ್ರಭಾವಿ ವ್ಯಕ್ತಿಗಳು ಆ ದಾರಿಯನ್ನ ಆಕ್ರಮಿಸಿಕೊಂಡಿದ್ದಾರೆ ಅಂತಾರೆ ಸ್ಥಳಿಯರು. ಆದರೆ, ಮೂರು ದಶಕಗಳಿಂದ ಇಡೀ ವ್ಯವಸ್ಥೆಗೆ ಒಂದು ದಾರಿ ಬಿಡಿಸಿಕೊಡಲಾಗಲಿಲ್ಲ ಅಂದರೆ, ಇವರೆಲ್ಲಾ ಎಂದ ನಾಯಕರು, ಅಧಿಕಾರಿಗಳು, ಯಾವ ಕಾರಣಕ್ಕೆ ದಾರಿ ಬಿಡಿಸಿಕೊಟ್ಟಿಲ್ಲ ಅಂತ ಹತ್ತಾರು ಸಂಶಯಗಳು ಮೂಡುತ್ತದೆ. ಇನ್ನಾದರು, ಸಂಬಂಧಪಟ್ಟ ಅಧಿಕಾರಿಗಳು, ರಾಜಕಾರಣಿಗಳು, ಗ್ರಾಮ ಪಂಚಾಯಿತಿಯವರು ಇವರಿಗೂ ನಾಲ್ಕು ಜನರಂತೆ ಬದುಕುವ ಅವಕಾಶ ಮಾಡಿಕೊಡಲಿ. ಇಲ್ಲವಾದರೆ, ಈ ಭೂಮಿ ಉಳ್ಳವರಿಗೆ ಮಾತ್ರ ಬದುಕುವ ಅವಕಾಶ ಅನ್ನೋದಾದರೆ, ಬಡವರು ಏನು ಮಾಡಬೇಕೆಂಬ ಪ್ರಶ್ನೆ ಮೂಡಲಿದೆ. ನೋಡೋಣ ಸರ್ಕಾರ ಏನ್ ಮಾಡುತ್ತೆ ಅಂತ.