ಮೂಡಿಗೆರೆ : ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ನಾಯಕರುಗಳ ದುರಾಡಳಿತದಿಂದ ದೇಶದ ಜನತೆ ಅಕ್ಷರಶಃ ಕಂಗಾಲಾಗಿದ್ದಾರೆ : ಯಾಕೂಬ ದಾರಿಮಿ.

302
firstsuddi

ಮೂಡಿಗೆರೆ : ಪಟ್ಟಣದ ಬದ್ರಿಯಾ ಜುಮ್ಮಾ ಮಸೀದಿ ಆವರಣದಲ್ಲಿ ರಾಷ್ಟ್ರ ರಕ್ಷಣೆಗೆ ಸೌಹಾರ್ದ ಸಂಕಲ್ಪ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಜಿಲ್ಲಾ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜುಮ್ಮಾ ಮಸೀದಿ ಖತೀಬ್ ಯಾಕೂಬ್ ದಾರಿಮಿ ಅವರು, ದೇಶದ ಆಡಳಿತದ ಚುಕ್ಕಾಣಿ ಹಿಡಿದಿರುವ ನಾಯಕರುಗಳ ದುರಾಡಳಿತದಿಂದ ದೇಶದ ಜನತೆ ಅಕ್ಷರಶಃ ಕಂಗಾಲಾಗಿದ್ದಾರೆ. ಅನೌಪಚಾರಿಕ ಕಾನೂನು ಕಟ್ಟಳೆಗಳಿಂದಾಗಿ ಜನ ಬೇಸತ್ತು ದಿಕ್ಕು ತೋಚದಂತಾಗಿದ್ದಾರೆ. ಸದನದಲ್ಲಿ ತಮ್ಮ ಸಂಖ್ಯಾ ಬಲ ಹೆಚ್ಚು ಇರುವುದರಿಂದ ತಮಗೆ ಇಷ್ಟ ಬಂದಂತೆ ಕಾನೂನುಗಳನ್ನು ಮಾಡಿ ಜಾರಿಗೆ ತರುತ್ತಿದ್ದಾರೆ. ಭಾರತದಲ್ಲಿ ನೆಲೆಸಿ ಜೀವನ ಕಂಡುಕೊಂಡಿರುವ ಮೂಲ ನಿವಾಸಿಗಳ ಮೇಲೆ ಸವಾರಿ ನಡೆಸಲು ಉದ್ದೇಶ ಪೂರ್ವಕ ತಯಾರಿ ನಡೆಸಿದ್ದಾರೆ. ಇದು ಭಾರತದ ಸಂವಿಧಾನವನ್ನೇ ದುರ್ಬಲಗೊಳಿಸುವ ಹುನ್ನಾರ ಎಂದರು. ಭಾರತದ ಸಂವಿಧಾನ ರಕ್ಷಣೆಗಾಗಿ ಭಾರತೀಯರೆಲ್ಲರೂ ಆಂದೋಲನ ಕೈಗೊಳ್ಳಬೇಕಿದೆ. ಜಾತಿ ವ್ಯವಸ್ಥೆಯನ್ನು ಬದಿಗೊತ್ತಿ ಜಾತ್ಯಾತೀಯತೆ ಆಧಾರದ ಮೇಲೆ ಜೀವನ ನಡೆಸುತ್ತಿರುವ ಭಾರತೀಯರನ್ನು ಜಾತಿ ಆಧಾರದ ಮೇಲೆ ಎತ್ತಿಕಟ್ಟಿ ಜನರ ನಡುವೆ ಕಂದಕ ಸೃಷ್ಟಿಸಿ ಒಡೆದು ಆಳುವ ನೀತಿ ಮಾಡಲಾಗುತ್ತಿದೆ. ಇಂಥಹ ದುರಾಡಳಿತದ ದೌರ್ಜನ್ಯಕ್ಕೆ ಕೊನೆ ಕಾಣಿಸಬೇಕಾಗಿರುವುದರಿಂದ ಭಾರತೀಯರೆಲ್ಲರೂ ಒಟ್ಟಾಗಿ ಮತ್ತೊಮ್ಮೆ ಸ್ವಾತಂತ್ರ್ಯ ಸಂಗ್ರಾಮಕ್ಕೆ ಸಿದ್ಧರಾಗಬೇಕು ಎಂದು ಕೆರೆ ನೀಡಿದರು.
ಇಂದಿನ ದಿನಗಳಲ್ಲಿ ಭಾರತೀಯ ಸಂವಿಧಾನವು ಅಪಾಯಕ್ಕೆ ಸಿಲುಕಿದ್ದು, ದುರಾಡಳಿತ ನಡೆಸುವ ದುಷ್ಟ ಆಡಳಿತಕಾರರ ಕಪಿ ಮುಷ್ಠಿಯಲ್ಲಿ ಸಿಕ್ಕು ನಲುಗುತ್ತಿದೆ. ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿರುವ ನೈಜ ಹಾಗೂ ವಸ್ತುಸ್ಥಿತಿಯ ಸಂವಿಧಾನವು ತನ್ನ ಮಹತ್ವವನ್ನು ಉಳಿಸಿಕೊಂಡು ತನ್ನ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕಿದೆ. ಅದಕ್ಕಾಗಿ ಇಂಥಹ ಹೋರಾಟಗಳು ಅತ್ಯಗತ್ಯ, ಎಲ್ಲರೂ ಒಗ್ಗಟಾಗಿ ಮುಂದುವರೆಯೋಣ ಎಂದು ಹ್ಯಾಂಡ್ ಪೋಸ್ಟ್ ಮಸೀದಿಯ ಖತೀಬ್ ಸಲೀಂ ಫೈಜಿ ಇರ್ಫಾನಿ ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ವಿದ್ವಾಂಸ ಕಿತ್ತಲೆಗಂಡಿ ಕೆಹೆಚ್ ಇಕ್ಬಾಲ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಚಕ್ಕಮಕ್ಕಿಯ ಖಲಂದರಿಯಾ ಅನಾಥಾಶ್ರಮದ ಪ್ರಂಶುಪಾಲ ಹಂಝಾ ಮುಸ್ಲಿಯಾರ್, ಎಸ್.ಕೆ.ಎಸ್.ಎಸ್.ಎಫ್‍ಜಿಲ್ಲಾ ಘಟಕದ ಅಧ್ಯಕ್ಷ ಸಿ.ಕೆ.ಇಬ್ರಾಹಿಂ, ಕಾಸರಗೊಡಿನ ಜೆ.ಪಿ.ಮುಝಾವಿದ್ ಮಹಮದ್,ಸಿನಾನ್ ಫೈಜಿ, ಸುಲೈಮಾನ್ ಮುಸ್ಲಿಯಾರ್, ಎಸ್.ಕೆ.ಎಸ್.ಎಸ್.ಎಫ್ ತಾಲ್ಲೂಕು ಅಧ್ಯಕ್ಷ ಅಜೀಜ್ ಅರಬಿ, ಮುಖಂಡರುಗಳಾದ ಶರೀಫ್ ಎಂ.ಎಂ., ಎ.ಸಿ ಆಯೂಬ್ ಹಾಜಿ, ಅಶ್ರಫ್, ಫಾರೂಕ್, ನಾಸಿರ್, ಇಬ್ರಾಹಿಂ, ಬಿ.ಹೆಚ್ ಮೊದಮದ್ ಇದ್ದರು.