ಮೂಡಿಗೆರೆ : ಬಿ ಹೊಸಹಳ್ಳಿ ಗ್ರಾಮದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ, ಆತಂಕದಲ್ಲಿ ಗ್ರಾಮಸ್ಥರು…

595
firstsuddi

ಬಣಕಲ್: ಮೂಡಿಗೆರೆ ತಾಲ್ಲೂಕಿನ ಬಿ ಹೊಸಹಳ್ಳಿ ಗ್ರಾಮದಲ್ಲಿ ಹುಲಿ ಹೆಜ್ಜೆಗುರುತು ಪತ್ತೆಯಾಗಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ.
ಕಳೆದ ಒಂದು ವಾರದಿಂದ ಬಿ ಹೊಸಹಳ್ಳಿ ಸುತ್ತಮುತ್ತ ಹುಲಿ ಸಂಚರಿಸುತ್ತಿದ್ದು ಗ್ರಾಮದ ಪ್ರಸನ್ನ ಎಂಬುವವರ ಭತ್ತದ ಗದ್ದೆಯಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದ್ದು ಸ್ಥಳಕ್ಕೆ ಮೂಡಿಗೆರೆ ಅರಣ್ಯ ಅಧಿಕಾರಿಗಳು ಬೇಟಿ ನೀಡಿ ಹುಲಿ ಹೆಜ್ಜೆ ಎಂದು ಖಚಿತಪಡಿಸಿದ್ದಾರೆ. ಹುಲಿಯನ್ನು ಗ್ರಾಮದಿಂದ ಕಾಡಿಗಟ್ಟಲು ಅರಣ್ಯಾಧಿಕಾರಿಗಳು ಕೂಮಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಕುಂದೂರು ಸಾರಗೋಡು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಬಿ ಹೊಸಹಳ್ಳಿ ಗ್ರಾಮವೂ ನಿರಂತರ ಕಾಡುಪ್ರಾಣಿಗಳ ಹಾವಳಿಗೆ ತುತ್ತಾಗಿದೆ. ಬಿ ಹೊಸಹಳ್ಳಿ ಸುತ್ತಮುತ್ತ ಹುಲಿ ಸಂಚರಿಸುತ್ತಿರುವುದು ಗ್ರಾಮಸ್ಥರನ್ನು ಭಯಬೀತರಾಗಿಸಿದೆ. ಹುಲಿ ಹೆಜ್ಜೆ ಗುರುತು ಪತ್ತೆಯಾಗಿರುವುದು ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿ ಸಮೀಪವಾಗಿರುವುದರಿಂದ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ಉಮೇಶ್ ಮಾತನಾಡಿ ಬಿ ಹೊಸಹಳ್ಳಿ ಗ್ರಾಮವೂ ಸಾರಗೋಡು ಮೀಸಲು ಅರಣ್ಯಕ್ಕೆ ಹೊಂದಿಕೊಂಡಿರುವ ಗ್ರಾಮವಾಗಿದ್ದು ಬಿ ಹೊಸಹಳ್ಳಿ ಗ್ರಾಮದ ಪ್ರಸನ್ನ ಎಂಬುವವರ ಗದ್ದೆಯಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿರುವುದು ನಿಜ. ಆದರೆ ಜನರು ಭಯಬೀತರಾಗುವ ಅಗತ್ಯವಿಲ್ಲ. ಹುಲಿ ಆಹಾರ ಅರಸಿ ಊರಿನತ್ತ ಬಂದಿದೆ. ಅದನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜನರು ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬರುವ ಮುನ್ನ ಎಚ್ಚರ ವಹಿಸಬೇಕು ಎಂದರು.