ಮೂಡಿಗೆರೆ : ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಬೃಹತ್ ಶೋಭಾ ಯಾತ್ರೆ…

248
firstsuddi

ಮೂಡಿಗೆರೆ : ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಮೂಡಿಗೆರೆಯಲ್ಲಿ ಬೃಹತ್ ಶೋಭಾ ಯಾತ್ರೆಯನ್ನು ಆಯೋಜಿಸಲಾಗಿತ್ತು. ಶ್ರೀ ವೇಣುಗೋಪಾಲ ದೇವಾಲಯದಿಂದ ಹೊರಟ ಯಾತ್ರೆಯು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಲಯನ್ಸ್ ವೃತ್ತದಲ್ಲಿ ಸಮಾವೇಶಗೊಂಡಿತು.
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಅವರು, ದತ್ತಪೀಠದಲ್ಲಿ ಇರುವ ಗೋರಿಗಳನ್ನು ತೆರವುಗೊಳಿಸಿ ದತ್ತ ಪೀಠವನ್ನು ಹಿಂದೂಗಳಿಗೆ ಬಿಟ್ಟುಕೊಡಬೇಕು ಹಾಗೂ ಹಿಂದೂ ಅರ್ಚಕರುಗಳ ನೇಮಕವಾಗಬೇಕು. ಹಿಂದೂಗಳು ಕೇಸರಿ ಸಂತಾನವಾಗಿದ್ದು, ಶಿಷ್ಟಾಚಾರ, ಸಂಸ್ಕಾರಗಳನ್ನು ಅರಿತು ಮುಂದುವರೆಯಬೇಕು. ರಾಜಕೀಯ ಬಲಿಷ್ಟತೆ ನಮಗಿದ್ದು, ಹಿಂದೂ ಧರ್ಮದ ನೆಲೆಯಿಂದ ಅದು ನಮಗೆ ದೊರೆತಿದೆ. ಸರ್ಕಾರ ನಮ್ಮದೇ ಆದರೂ ಕೂಡ ಕಾರ್ಯಕರ್ತರುಗಳು ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತರಾಗದೆ ದತ್ತಪೀಠವು ನಮ್ಮದಾಗುವವರೆಗೆ ಹೋರಾಡಬೇಕು. ತಾಯಿ ಹೇಳಿಕೊಟ್ಟ ಸಂಸ್ಕೃತಿಯಂತೆ ನಿಷ್ಠೆಯಿಂದ ವ್ರತ ನಿಯಮಗಳಿಂದ ದತ್ತ ಮಾಲೆಯನ್ನು ಧರಿಸಿ ಪೂಜೆ ಮಾಡುತ್ತಿರುವ ಕಾರ್ಯಕರ್ತರುಗಳ ಮೇಲೆ ದತ್ತಾತ್ರೇಯ ಸ್ವಾಮಿಯ ಅನುಗ್ರಹ ಉಂಟಾಗಲಿ ಎಂದು ಆಶೀರ್ವದಿಸಿದರು.
ಮುಂದುವರೆದು ಮಾತನಾಡಿದ ಅವರು ಮತಾಂತರ, ಲವ್ ಜಿಹಾದ್, ಗೋ ಹತ್ಯೆಯಂಥಹ ಅನಾಗರಿಕ ಚಟುವಟಿಕೆಗಳ ವಿರುದ್ಧ ಕಾರ್ಯಕರ್ತರುಗಳು ಹೋರಾಟ ಮಾಡುತ್ತಿರುವುದು ಶ್ಲಾಘನೀಯ. ನಿಮ್ಮ ಈ ಹೋರಾಟದ ಜೊತೆಗೆ ಭಾರತವನ್ನು ಸಂಪೂರ್ಣ ಹಿಂದೂ ರಾಷ್ಟ್ರವನ್ನಾಗಿಸುವವರೆಗೆ ಹೋರಾಟ ನಡೆಯಲಿ ಎಂದು ಕರೆ ನೀಡಿದರು. ವಿಶ್ವ ಹಿಂದೂ ಪರಿಷತ್ ಸಂಘಟನೆ ಬೃಹತ್ ಆಲದ ಮರ ಇದ್ದಂತೆ, ಇದರ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಯಕರ್ತರು ಉತ್ತಮ ಸಮಾಜಕ್ಕೆ ದುಸ್ವಪ್ನವಾಗಿರುವ ಲವ್ ಜಿಹಾದ್, ಗೋ ಹತ್ಯೆ, ಮತಾಂತರಗಳಂಥಹ ಅನಿಷ್ಟ ಚಟುವಟಿಕೆಗಳ ವಿರುದ್ಧ ನಿಮ್ಮ ಹೋರಾಟ ನಿರಂತರವಾಗಿರಬೇಕು. 64 ಇಂಚಿನ ಎದೆಯುಳ್ಳ ಎದೆಗಾರಿಕೆಯ ವ್ಯಕ್ತಿಯೋರ್ವ ನಮ್ಮ ದೇಶದ ಪ್ರಧಾನಿಯಾಗಿದ್ದರಿಂದಲೇ ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ರಾರಾಜಿಸಲು ಸಾಧ್ಯವಾಗಿದೆ. ನಮ್ಮೆಲ್ಲರ ಸಂಪೂರ್ಣ ಸಹಕಾರ ಅವರಿಗಿದ್ದು ದೇಶಾದ್ಯಂತ ಸಮಾನ ನಾಗರೀಕ ಸಂಹಿತೆ ಜಾರಿಯಾಗುವಂತೆ ಅವರು ನೋಡಿಕೊಳ್ಳಬೇಕು ಎಂದರು.
ಪ್ರಾಸ್ಥಾವಿಕ ಭಾಷಣ ಮಾಡಿದ ಭಜರಂಗದಳ ಜಿಲ್ಲಾ ಗೋ ರಕ್ಷಕ್ ಪ್ರಮುಖ್ ಅವಿನಾಶ್ ಅವರು ಮಾತನಾಡಿ, ಕಾಶ್ಮೀರ ಕೈಗೆ ಬಂದಾಯಿತು, ಅಯೋಧ್ಯೆ ನಮ್ಮದಾಯಿತು, ಮುಂದಿನ ಗುರಿ ದತ್ತ ಪೀಠ, ಭರವಸೆಯ ನಾಳೆಗಳು ನಮ್ಮದೇ ಎಂದರು. ಮುಂದಿನ ನಮ್ಮ ವಿಜಯೋತ್ಸವ ದತ್ತಪೀಠದಲ್ಲಿ ಆಗಬೇಕು ಎಂಬುವುದು ಧ್ಯೇಯವಾಗಿದೆ. ಈ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರ ಎಂದರು.
ಸಮಾವೇಶದಲ್ಲಿ ಸ್ವಾಗತವನ್ನು ಕೊಟ್ರಗೆರೆ ಚಿರಾಗ್ ಹಾಗೂ ನಿರೂಪಣೆಯನ್ನು ಹಾರ್ಮಕ್ಕಿ ಚಿರಾಗ್ ಅವರು ಮಾಡಿದರು. ವೇದಿಕೆಯಲ್ಲಿ ರಾಜ್ಯ ಗೋ ಸಲಹಾ ಸಮಿತಿ ಅಧ್ಯಕ್ಷ ಹಾಗೂ ವಕೀಲರಾದ ಸಿದ್ಧಯ್ಯ, ತಾಲ್ಲೂಕು ಸಂಚಾಲಕ ಬಣಕಲ್ ವಿನಯ್, ಭಜರಂಗದಳ ಜಿಲ್ಲಾ ಸಹ ಸಂಚಾಲಕ ಸಿ.ಡಿ.ಶಿವಕುಮಾರ್, ವಿ.ಹೆಚ್.ಪಿ ತಾಲ್ಲೂಕು ಅಧ್ಯಕ್ಷ ಸಾಲುಮರ ಮಹೇಶ್, ನಗರ ಸಂಚಾಲಕ ಕಡಿದಾಳ್ ಮಧು, ಸಂತೋಶ್ ಇದ್ದರು. ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಕಡೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ಕಾರ್ಯಕರ್ತರುಗಳು ಆಗಮಿಸಿದ್ದರು.